
ತೇಜಸ್ವಿ ಯಾದವ್
ಪಟ್ನಾ: ಬಿಹಾರದಲ್ಲಿ ಎನ್‌ಡಿಎ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಹಲವು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿದ್ದು, ಆರ್‌ಜೆಡಿ ನಾಯಕ ಹಾಗೂ ಇಂಡಿಯಾ ಮೈತ್ರಿಕೂಟದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಇದನ್ನು ತಳ್ಳಿಹಾಕಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಉನ್ನತ ಮಟ್ಟದ ನಾಯಕರ ಆದೇಶದ ಮೇರೆಗೆ ಎನ್‌ಡಿಎ ಪರ ಮತಗಟ್ಟೆ ಸಮೀಕ್ಷೆಗಳು ಫಲಿತಾಂಶ ಪ್ರಕಟಿಸಿವೆ ಎಂದಿದ್ದಾರೆ.
ಇಂಡಿಯಾ ಮೈತ್ರಿಕೂಟವು ಬಹುಮತದೊಂದಿಗೆ ಸರ್ಕಾರ ರಚಿಸಲಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಬದಲಾವಣೆಯನ್ನು ಬಯಸಿದ್ದಾರೆ. ಮಹಾಘಟಬಂಧನ್ (ಇಂಡಿಯಾ ಮೈತ್ರಿಕೂಟ) ಪರವಾಗಿ ಜನರು ಒಲವು ಹೊಂದಿದ್ದಾರೆ. ನಾವು ನವೆಂಬರ್ 18ರಂದು ಪ್ರಮಾಣವಚನ ಸ್ವೀಕರಿಸುತ್ತೇವೆ ಎಂದು ಯಾದವ್ ತಿಳಿಸಿದ್ದಾರೆ.
ಬಿಜೆಪಿ ನಾಯಕರು ಮತ ಎಣಿಕೆ ಪ್ರಕ್ರಿಯೆಯನ್ನು ವಿಳಂಬಗೊಳಿಸಲು ಪ್ರಯತ್ನಿಸುತ್ತಾರೆ. ಈ ರೀತಿ ನಡೆಯದಂತೆ ನೋಡಿಕೊಳ್ಳುತ್ತೇವೆ. ನಾವು ಬಿಜೆಪಿಯವರ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಿದ್ದೇವೆ ಎಂದು ಯಾದವ್ ಹೇಳಿದ್ದಾರೆ.
ಬಿಹಾರದಲ್ಲಿ ಮಂಗಳವಾರ ನಡೆದ ಎರಡನೇ ಮತ್ತು ಅಂತಿಮ ಹಂತದ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ ಶೇ. 69ರಷ್ಟು ಮತದಾನವಾಗಿದೆ.
ವಿವಿಧ ಮತಗಟ್ಟೆ ಸಮೀಕ್ಷೆಗಳ ಪ್ರಕಾರ, ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. 'ಮಹಾಘಟಬಂಧನ್'ಗೆ ಮತ್ತೆ ನಿರಾಶೆ ಮೂಡಲಿದೆ. ಮಾಜಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷ ಕಳಪೆ ಪ್ರದರ್ಶನ ಕಾಣಲಿದೆ ಎಂದು ಸಮೀಕ್ಷೆಗಳು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.