ADVERTISEMENT

ಬಿಹಾರ ವಿಧಾನಸಭೆ ಚುನಾವಣೆ: 14ರಂದು ಮತ ಎಣಿಕೆ; ಯಾರ ಕೊರಳಿಗೆ ಗೆಲುವಿನ ‘ಹಾರ’?

*ಗೆಲುವಿನ ವಿಶ್ವಾಸದಲ್ಲಿ ಎನ್‌ಡಿಎ, ‘ಇಂಡಿಯಾ’

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 15:50 IST
Last Updated 12 ನವೆಂಬರ್ 2025, 15:50 IST
<div class="paragraphs"><p>ಮತ ಎಣಿಕೆ</p></div>

ಮತ ಎಣಿಕೆ

   

–ಪ್ರಜಾವಾಣಿ ಚಿತ್ರ

ಪಟ್ನಾ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಬಳಿಕ ನಡೆದ ಬಿಹಾರ ವಿಧಾನಸಭೆ ಚುನಾವಣೆಯು ದಾಖಲೆಯ ಮತದಾನಕ್ಕೆ ಸಾಕ್ಷಿಯಾಗಿತ್ತು. ಸರಳ ಬಹುಮತ ಪಡೆಯುವ ಮೂಲಕ ಯಾರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ.

ADVERTISEMENT

ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ. ನಿತೀಶ್‌ ಕುಮಾರ್ ಅವರು ದಾಖಲೆಯ ಐದನೇ ಬಾರಿಗೆ ಮುಖ್ಯಮಂತ್ರಿಯಾಗುವರೋ ಅಥವಾ ಬದಲಾವಣೆ ಬಯಸಿರುವ ಜನರು, ನಿತೀಶ್‌ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ‘ಇಂಡಿಯಾ’ ಒಕ್ಕೂಟದ ಕೈಗೆ ಅಧಿಕಾರದ ಚುಕ್ಕಾಣಿ ನೀಡುವರೋ ಎಂಬುದು ಶುಕ್ರವಾರ ನಿಚ್ಚಳವಾಗಲಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ವಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಗೆಲುವು ತಮ್ಮದೇ ಎಂಬ ವಿಶ್ವಾಸ ವ್ಯಕ್ತಪಡಿಸಿವೆ. ಭಾರಿ ಪ್ರಮಾಣದಲ್ಲಿ ಮತ ಚಲಾವಣೆ ಆಗಿರುವುದು ತನ್ನ ಉತ್ತಮ ಆಡಳಿತಕ್ಕೆ ಮತ್ತೊಮ್ಮೆ ಜನಾದೇಶ ಸಿಕ್ಕಿರುವುದರ ಸಂಕೇತ ಎಂದು ಆಡಳಿತಾರೂಢ ಎನ್‌ಡಿಎ ಹೇಳುತ್ತಿದೆ.

‘ಇಂಡಿಯಾ’ ಒಕ್ಕೂಟ ಈ ಮಾತನ್ನು ತಳ್ಳಿಹಾಕುತ್ತಿದೆ. ರಾಜ್ಯದ ಜನರು ಬದಲಾವಣೆ ಬಯಸಿದ್ದಾರೆ.  ಜನರ ಈ ಇರಾದೆಯು ದಾಖಲೆಯ ಮತ ಚಲಾವಣೆ ಮೂಲಕ ವ್ಯಕ್ತವಾಗಿದೆ ಎಂದು ‘ಇಂಡಿಯಾ’ ನಾಯಕರು ವಿಶ್ಲೇಷಿಸುತ್ತಿದ್ದಾರೆ.

ಎನ್‌ಡಿಎ ಸರಳ ಬಹುಮತ ಪಡೆದು, ಮತ್ತೆ ಅಧಿಕಾರಕ್ಕೇರಲಿದೆ ಎಂದು ಎಲ್ಲ ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಇದು ವಿಪಕ್ಷ ಪಾಳಯದಲ್ಲಿ ಕಿರಿಕಿರಿಯನ್ನುಂಟು ಮಾಡಿದೆ. ವಿರೋಧ ಪಕ್ಷಗಳು ಸಮೀಕ್ಷೆಗಳನ್ನು ತಳ್ಳಿಹಾಕಿವೆ.

ಚುನಾವಣಾ ತಂತ್ರಗಾರ ಪ್ರಶಾಂತ ಕಿಶೋರ್‌ ನೇತೃತ್ವದ ಜನ ಸುರಾಜ್‌ ಪಕ್ಷದ ಸಾಧನೆ ನಿರಾಶಾದಾಯಕವಾಗಿರಲಿದೆ ಎಂದೂ ಸಮೀಕ್ಷೆಗಳು ಹೇಳಿವೆ.

‘ಆರ್‌ಜೆಡಿ ಜೆಡಿಯುಗೆ ಹೆಚ್ಚು ಸ್ಥಾನಗಳಲ್ಲಿ ಗೆಲುವು’

‘ಆರ್‌ಜೆಡಿ ಮತ್ತು ಜೆಡಿಯು ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿವೆ. ಈ ಮಾತು ವಿರೋಧಾಭಾಸದಂತೆ ಕಂಡುಬಂದರೂ ಇದೇ ವಾಸ್ತವ’ ಎಂದು ರಾಜಕೀಯ ವಿಶ್ಲೇಷಕ ವಿದ್ಯಾರ್ಥಿ ವಿಕಾಸ್‌ ಹೇಳುತ್ತಾರೆ. ವಿದ್ಯಾರ್ಥಿ ವಿಕಾಸ್ ಅವರು ಪಟ್ನಾದ ಎ.ಎನ್.ಸಿನ್ಹಾ ಇನ್ಸ್‌ಟಿಟ್ಯೂಟ್‌ ಆಫ್‌ ಸೋಷಿಯಲ್ ಸೈನ್ಸಸ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.

‘ಹಳೆಯ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿ ಮಾಡುವುದಾಗಿ ಆರ್‌ಜೆಡಿ ಭರವಸೆ ನೀಡಿದೆ. ಬಿಹಾರದಲ್ಲಿ ಪಿಂಚಣಿದಾರರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಮಾಸಿಕ ಪಿಂಚಣಿಯೇ ಇವರಿಗೆ ಆಧಾರ. ಈ ಅಂಶವು ಆರ್‌ಜೆಡಿಗೆ ಅನುಕೂಲವಾಗಲಿದ್ದು ಪಕ್ಷಕ್ಕೆ ಹೆಚ್ಚು ಸ್ಥಾನ ತಂದು ಕೊಡಲಿದೆ’ ಎಂದು ಹೇಳುತ್ತಾರೆ.

‘ನಿತೀಶ್‌ ಕುಮಾರ್‌ ಮುಖ್ಯಮಂತ್ರಿಯಾಗಿದ್ದ ಮೊದಲ ಐದು ವರ್ಷ ಕಾಲ ರಾಜ್ಯದಲ್ಲಿ ಕಾನೂನು–ಸುವ್ಯವಸ್ಥೆ ಹದಗೆಟ್ಟಿತ್ತು. ಇದೇ ಕಾರಣಕ್ಕೆ ಜೆಡಿಯುಗೆ ಹಿನ್ನಡೆಯಾಗಬಹುದು’ ಎನ್ನುತ್ತಾರೆ.

‘ಮತ್ತೊಂದೆಡೆ ಜೆಡಿಯು ವರಿಷ್ಠ ನಿತೀಶ್‌ ಕುಮಾರ್‌ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವಲ್ಲಿ ಬಿಜೆಪಿಯಲ್ಲಿ ಸ್ಪಷ್ಟತೆ ಇರಲಿಲ್ಲ. ಇಂಥ ನಡೆಯಿಂದ ಬಿಜೆಪಿಯು ತನ್ನ ಕಾಲಮೇಲೆ ತಾನೇ ಕಲ್ಲು ಹಾಕಿಕೊಂಡಂತಾಗಿದೆ’ ಎಂದು ಅವರು ವಿಶ್ಲೇಷಿಸುತ್ತಾರೆ.

‘ಮಿತ್ರ ಪಕ್ಷಗಳಿಗೂ ಅಚ್ಚರಿ ಕಾದಿದೆ’: ‘ವಿಧಾನಸಭೆ ಚುನಾವಣೆಯ ಫಲಿತಾಂಶವು  ವಿರೋಧ ಪಕ್ಷಗಳಿಗೆ ಮಾತ್ರವಲ್ಲ ನಮ್ಮ ಮಿತ್ರ ಪಕ್ಷಗಳಿಗೂ ಆಘಾತ ನೀಡಲಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಜೆಡಿಯು ಮುಖಂಡರೊಬ್ಬರು ಹೇಳಿದ್ದಾರೆ. ‘ಜೆಡಿಯು 25ಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಜನ ಸುರಾಜ್‌ ಪಕ್ಷದ ನಾಯಕ ಪ್ರಶಾಂತ್ ಕಿಶೋರ್‌ ಹೇಳಿದ್ದರು. ಪಕ್ಷದ ವಿರುದ್ಧ ನಡೆದಿರುವ ಸಂಚಿನ ಬಗ್ಗೆ ನಮ್ಮ ಕಾರ್ಯಕರ್ತರು ಗ್ರಹಿಸಿ ಕೂಡಲೇ ಕಾರ್ಯಪ್ರವೃತ್ತರಾದರು. ಅವರ ಪರಿಶ್ರಮದಿಂದ ಪಕ್ಷವು ಹೆಚ್ಚು ಸ್ಥಾನದಲ್ಲಿ ಗೆದ್ದು ಎಲ್ಲರಿಗೂ ಆಘಾತ ನೀಡಲಿದೆ’ ಎಂದು ಹೇಳಿದ್ದಾರೆ.

ಎನ್‌ಡಿಎ ಭಾರಿ ಗೆಲುವು ಸಾಧಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿದ್ದು ಇದು ಜನರ ಭಾವನೆಗಳನ್ನು ಪ್ರತಿಫಲಿಸುತ್ತದೆ. ಮತಗಟ್ಟೆ ಸಮೀಕ್ಷೆಗಳು ಅಂದಾಜು ಮಾಡಿರುವುದಕ್ಕಿಂತಲೂ ಭಾರಿ ಗೆಲುವು ನಮ್ಮದಾಗಲಿದೆ
–ನಿತ್ಯಾನಂದ ರಾಯ್, ಕೇಂದ್ರ ಸಚಿವ ಬಿಜೆಪಿ ನಾಯಕ
ಜೆಡಿಯು 65–70 ಸ್ಥಾನಗಳನ್ನು ಪಡೆಯುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಎನ್‌ಡಿಎ 130–135 ಸ್ಥಾನಗಳಲ್ಲಿ ಗೆಲ್ಲಲಿದೆ
–ಶ್ರವಣ ಕುಮಾರ್, ಜೆಡಿಯು ಹಿರಿಯ ನಾಯಕ
ಈ ಹಿಂದೆ ಮತಗಟ್ಟೆ ಸಮೀಕ್ಷೆಗಳು ಸುಳ್ಳಾಗಲಿವೆ. ಜನರು ಮತ ಚಲಾಯಿಸಲು ಸರದಿಯಲ್ಲಿ ನಿಂತಿದ್ದಾಗಲೇ ಸಮೀಕ್ಷೆಗಳು ಹೊರಬಿದ್ದಿವೆ. ಆಪರೇಷನ್‌ ಸಿಂಧೂರ ಹಿರಿಯ ನಟ ಧರ್ಮೇಂದ್ರ ‘ಸಾವು’ ಕುರಿತು ಪರಿಶೀಲಿಸದೇ ಮಾಧ್ಯಮಗಳು ವರದಿ ಪ್ರಕಟಿಸಿದ್ದವು
–ತೇಜಸ್ವಿ ಯಾದವ್, ಆರ್‌ಜೆಡಿ ನಾಯಕ
ದಾಖಲೆಯ ಮತದಾನವು ನಿರುದ್ಯೋಗ ಮತ್ತು ಭ್ರಷ್ಟಾಚಾರದ ಬಗ್ಗೆ ಜನರಲ್ಲಿ ಆಕ್ರೋಶ ಮತ್ತು ಬದಲಾವಣೆ ಬಯಸಿರುವುದನ್ನು ತೋರಿಸುತ್ತದೆ. ಬಿಹಾರದಲ್ಲಿ ‘ಇಂಡಿಯಾ’ ಒಕ್ಕೂಟ ಸರ್ಕಾರ ರಚಿಸಲಿದೆ.
–ಪವನ್‌ ಖೇರಾ, ಪ್ರಚಾರ ವಿಭಾಗದ ಮುಖ್ಯಸ್ಥ ಕಾಂಗ್ರೆಸ್‌
ಬಿಹಾರದ ಜನತೆ ಬದಲಾವಣೆ ಬಯಸಿದ್ದಾರೆ. ಭಾರಿ ಪ್ರಮಾಣದ ಮತ ಚಲಾವಣೆ ಹಾಗೂ ನಮ್ಮ ವರದಿಗಳು ಈ ಸಂಗತಿಯನ್ನೇ ಹೇಳುತ್ತಿದ್ದು ‘ಇಂಡಿಯಾ’ ಒಕ್ಕೂಟ ಅಧಿಕಾರಕ್ಕೇರಲಿದೆ
–ದೀಪಂಕರ್ ಭಟ್ಟಾಚಾರ್ಯ, ಪ್ರಧಾನ ಕಾರ್ಯದರ್ಶಿ ಸಿಪಿಐ(ಎಂಎಲ್‌) ಲಿಬರೇಷನ್
ಮತಗಟ್ಟೆ ಸಮೀಕ್ಷೆಗಳಲ್ಲಿ ‘ಇಂಡಿಯಾ’ಗೆ ನಂಬಿಕೆ ಇಲ್ಲ. ಕ್ಷೇತ್ರಗಳಲ್ಲಿ ಸಂಚರಿಸಿ ಪಕ್ಷದ ಕಾರ್ಯಕರ್ತರು ಸಿದ್ಧಪಡಿಸಿರುವ ವರದಿಗಳು ‘ಮಹಾಘಟಬಂಧನ’ ಪರ ಅಲೆ ಇದೆ ಎಂದು ಹೇಳಿವೆ
–ಕೆ.ಸಿ.ವೇಣುಗೋಪಾಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿ
ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ. ಅಭಿವೃದ್ಧಿ ಮತ್ತು ಉತ್ತಮ ಆಡಳಿತಕ್ಕಾಗಿ ಅವರು ಎನ್‌ಡಿಎ ಪರ ನಿರ್ಣಾಯಕ ಮತ ಚಲಾಯಿಸಿದ್ದಾರೆ.
–ಬಿಜೆಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.