
ಸ್ಟಾಲಿನ್ ಮತ್ತು ನಿತೀಶ್ ಕುಮಾರ್
ಚೆನ್ನೈ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದಕ್ಕಾಗಿ ಜೆಡಿಯು ನಾಯಕ ನಿತೀಶ್ ಕುಮಾರ್ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅಭಿನಂದಿಸಿದ್ದಾರೆ.
‘ಬಿಹಾರ ವಿಧಾನಸಭಾ ಚುನಾವಣೆಯ ನಿರ್ಣಾಯಕ ಗೆಲುವಿಗಾಗಿ ಜೆಡಿಯು ಹಿರಿಯ ನಾಯಕ ನಿತೀಶ್ ಕುಮಾರ್ ಅವರನ್ನು ನಾನು ಅಭಿನಂದಿಸುತ್ತೇನೆ ಮತ್ತು ಬಿಹಾರದ ಜನರ ನಿರೀಕ್ಷೆಗಳನ್ನು ಈಡೇರಿಸುವಂತೆ ಅವರಿಗೆ ಶುಭ ಕೋರುತ್ತೇನೆ. ಇದೇ ವೇಳೆ ದಣಿವರಿಯದೆ ಪ್ರಚಾರ ನಡೆಸಿದ್ದಕ್ಕಾಗಿ ಯುವ ನಾಯಕ ತೇಜಸ್ವಿ ಯಾದವ್ ಅವರನ್ನು ಶ್ಲಾಘಿಸುತ್ತೇನೆ’ ಎಂದು ಸ್ಟಾಲಿನ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಬಿಹಾರ ವಿಧಾನಸಭೆ ಚುನಾವಣಾ ಫಲಿತಾಂಶವು ಎಲ್ಲರಿಗೂ ಪಾಠವಾಗಲಿದೆ. ಚುನಾವಣಾ ಫಲಿತಾಂಶಗಳು ಸಮಾಜದ ಕಲ್ಯಾಣ, ಸಾಮಾಜಿಕ ಮತ್ತು ಸೈದ್ಧಾಂತಿಕ ಒಕ್ಕೂಟಗಳು, ಸ್ಪಷ್ಟ ರಾಜಕೀಯ ಸಂದೇಶ ಮತ್ತು ಮತ ಚಲಾಯಿಸುವ ಪ್ರತಿಯೊಬ್ಬರಿಗೂ ಸಮರ್ಪಿತ ನಿರ್ವಹಣೆಯನ್ನು ಪ್ರತಿಬಿಂಬಿಸುತ್ತವೆ’ ಎಂದು ಅವರು ಹೇಳಿದ್ದಾರೆ.
‘ಇಂಡಿಯಾ’ ಬಣದ ನಾಯಕರು ಅನುಭವಿ ರಾಜಕಾರಣಿಗಳಾಗಿದ್ದು, ಚುನಾವಣಾ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಹೊಸ ಕಾರ್ಯತಂತ್ರಗಳನ್ನು ಯೋಜಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
‘ಬಿಹಾರ ಚುನಾವಣೆಯ ಫಲಿತಾಂಶವು ಚುನಾವಣಾ ಆಯೋಗದ ದುಷ್ಕೃತ್ಯಗಳು ಮತ್ತು ಅಜಾಗರೂಕ ಕ್ರಮಗಳನ್ನು ಬಿಚ್ಚಿಡದಿರಬಹುದು. ಆದರೆ, ಚುನಾವಣಾ ಆಯೋಗದ ಘನತೆ ಅತ್ಯಂತ ಕೆಳಮಟ್ಟಕ್ಕೆ ಕುಸಿದಿದೆ ಎಂದರೆ ತಪ್ಪಲ. ಈ ದೇಶದ ನಾಗರಿಕರು ಬಲಿಷ್ಠ ಮತ್ತು ನಿಷ್ಪಕ್ಷಪಾತ ಚುನಾವಣಾ ಆಯೋಗವನ್ನು ಹೊಂದುವುದಕ್ಕೆ ಅರ್ಹರಾಗಿದ್ದಾರೆ’ ಎಂದು ಸ್ಟಾಲಿನ್ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.