
ಬಿಹಾರದಲ್ಲಿ ಮತ ಎಣಿಕೆ ನಡೆದಿದ್ದು, ಜನರು ಬೃಹತ್ ಪರದೆಯಲ್ಲಿ ಫಲಿತಾಂಶ ವೀಕ್ಷಿಸುತ್ತಿರುವುದು
ಪಿಟಿಐ ಚಿತ್ರ
ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಿಸಿದ್ದು, ಆರಂಭಿಕ ಹಂತದಲ್ಲಿ ಬಿಜೆಪಿ ಮತ್ತು ಆರ್‌ಜೆಡಿ ಪರಸ್ಪರ ಪ್ರಬಲ ಪೈಪೋಟಿ ನೀಡುತ್ತಿದ್ದರೂ, ಮಹಾಘಟಬಂಧನ ವಿರುದ್ಧ ಎನ್‌ಡಿಎ ಮೈತ್ರಿಕೂಟ ಮುನ್ನಡೆ ಸಾಧಿಸಿದೆ.
ಮತ ಎಣಿಕೆ ಆರಂಭವಾಗಿ ಎರಡು ಗಂಟೆಗಳು ಕಳೆದಿದ್ದು, ಬಿಜೆಪಿ ಮತ್ತು ಜೆಡಿಯುಗಳು ಉತ್ತಮ ಪ್ರದರ್ಶನ ತೋರುತ್ತಿವೆ. ಹಲವೆಡೆ ಉಭಯ ಪಕ್ಷಗಳ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ ಆರಂಭಿಕ ಹಂತದಲ್ಲಿ 56 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 55 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿತ್ತು. ಮತ್ತೊಂದೆಡೆ ನಿತೀಶ್ ಕುಮಾರ್ ಅವರ ಜೆಡಿಯು 45 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ಕಾಂಗ್ರೆಸ್ 7 ಕ್ಷೇತ್ರಗಳಲ್ಲಷ್ಟೇ ಮುನ್ನಡೆ ಕಾಯ್ದುಕೊಳ್ಳುವಲ್ಲಷ್ಟೇ ಸಾಧ್ಯವಾಗಿತ್ತು.
ಒಟ್ಟು 243 ಕ್ಷೇತ್ರಗಳ ಬಿಹಾರ ವಿಧಾನಸಭೆಯಲ್ಲಿ ಆರ್‌ಜೆಡಿ 143 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಕಾಂಗ್ರೆಸ್ 61 ಕ್ಷೇತ್ರದಲ್ಲಿ ಸ್ಪರ್ಧಿಸಿದೆ. ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಆರ್‌ಜೆಡಿ ಮತ್ತು ಜೆಡಿಯು ತಲಾ 101 ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ. ಇವುಗಳೊಂದಿಗೆ ಚಿರಾಗ್ ಪಾಸ್ವಾನ್ ಅವರ ಎಲ್‌ಜಿಪಿ (ರಾಮ್ ವಿಲಾಸ್), ಜಿತನ್ ರಾಮ್ ಮಾಂಜಿ ಅವರ ಹಮ್ (ಎಸ್) ಮತ್ತು ಉಪೇಂದ್ರ ಕುಶ್ವಾ ಅವರ ರಾಷ್ಟ್ರೀಯ ಲೋಕ ಮೋರ್ಚಾ ಕೂಡಾ ಮುನ್ನಡೆಯೊಂದಿಗೆ ಖಾತೆಗಳನ್ನು ತೆರೆಯುವ ಉತ್ಸಾಹದಲ್ಲಿವೆ.
ಇದೇ ಟ್ರೆಂಡ್ ಮುಂದುವರಿದರೆ ಮಹಾಘಟಬಂಧನ್‌ನಲ್ಲಿ ಕಾಂಗ್ರೆಸ್ ತನ್ನ ಕಳಪೆ ಪ್ರದರ್ಶನದೊಂದಿಗೆ ಅತ್ಯಂತ ದುರ್ಬಲ ಪಕ್ಷವಾಗಲಿದೆ. 2020ರ ಬಿಹಾರ ಚುನಾವಣೆಯನ್ನು ಗಮನಿಸಿದರೆ, ಆರ್‌ಜೆಡಿ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆಗಲೂ ಕಾಂಗ್ರೆಸ್ ಪ್ರದರ್ಶನ ಕಳಪೆಯಾಗಿತ್ತು. ಆಗ ಎನ್‌ಡಿಎ ಅಧಿಕಾರ ರಚಿಸಿತು. 144 ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಆರ್‌ಜೆಡಿ 75 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ 70ರಲ್ಲಿ ಸ್ಪರ್ಧಿಸಿ 19 ಸ್ಥಾನಗಳನ್ನು ಗೆದ್ದಿತ್ತು.
ಮತ್ತೊಂದೆಡೆ 2020ರ ಚುನಾವಣಾ ಫಲಿತಾಂಶಕ್ಕೆ ಹೋಲಿಸಿದರೆ, ಈ ಬಾರಿ ನಿತೀಶ್ ಕುಮಾರ್ ಅವರ ಜೆಡಿಯು ಉತ್ತಮ ಪ್ರದರ್ಶನ ನೀಡುತ್ತಿದೆ. ಕಳೆದ ಚುನಾವಣೆಯಲ್ಲಿ 43 ಕ್ಷೇತ್ರಗಳಲ್ಲಷ್ಟೇ ಗೆಲ್ಲಲು ಸಾಧ್ಯವಾಗಿದ್ದ ಜೆಡಿಯು ಈ ಬಾರಿ 71 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು ಯಾವುದೇ ಬಣಕ್ಕೆ 122 ಶಾಸಕರ ಬೆಂಬಲ ಅಗತ್ಯವಿದೆ. 2020ರಲ್ಲಿ ಎನ್‌ಡಿಎ ಬಣ 125 ಶಾಸಕರ ಬೆಂಬಲ ಹೊಂದಿತ್ತು. ಆಗ ಆರ್‌ಜೆಡಿ 74 ಕ್ಷೇತ್ರಗಳಲ್ಲಿ ಮತ್ತು ಬಿಜೆಪಿ 74 ಕ್ಷೇತ್ರಗಳಲ್ಲಿ ಗೆದ್ದಿದ್ದವು.
ಜೆಡಿಯು 63 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ
ಬಿಜೆಪಿ 61
ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ)– 34
ಲೋಕ್ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್)– 17
ಕಾಂಗ್ರೆಸ್– 10
ಹಿಂದುಸ್ತಾನಿ ಅವಾಮ್ ಮೋರ್ಚಾ (ಎಸ್)– 4
ಸಿಪಿಐ (ಎಂಎಲ್)(ಎಲ್)– 3
ರಾಷ್ಟ್ರೀಯ ಲೋಕ್ ಮೋರ್ಚಾ– 1
ವಿಕಸಶೀಲ್ ಇನ್‌ಸಾನ್ ಪಾರ್ಟಿ– 1
ಎಐಎಂಐಎಂ– 1
ಸಿಇಐ (ಎಂ)– 1
ಬಿಎಸ್‌ಪಿ–1
ಸ್ವತಂತ್ರ–1
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.