ಚುನಾವಣೆ
ಪಟ್ನಾ: ಬಿಹಾರದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ರಾಜ್ಯದಾದ್ಯಂತ 4 ಲಕ್ಷಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಡಿಜಿಪಿ ವಿನಯ್ ಕುಮಾರ್ ಗುರುವಾರ ಹೇಳಿದ್ದಾರೆ.
ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳು ಗಣನೀಯವಾಗಿ ಕಡಿಮೆಯಾಗಿರುವುದರಿಂದ ಈ ಬಾರಿ ಯಾವುದೇ ಮತಗಟ್ಟೆಗಳನ್ನು ಸ್ಥಳಾಂತರಿಸಲಾಗುವುದಿಲ್ಲ. ಜತೆಗೆ, ಇದೇ ಮೊದಲ ಬಾರಿ ರಾಜ್ಯದ ಮೂಲೆಯವರೆಗೂ ಭದ್ರತಾ ಸಿಬ್ಬಂದಿಯನ್ನು ಹೆಲಿಕಾಪ್ಟರ್ ಮೂಲಕವಲ್ಲದೆ ರಸ್ತೆ ಮೂಲಕ ಕಳುಹಿಸಲಾಗಿದೆ ಎಂದೂ ಅವರು ಹೇಳಿದರು.
ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಸುಮಾರು 500 ಸಿಬ್ಬಂದಿ ಈಗಾಗಲೇ ಚುನಾವಣಾ ಪೂರ್ವ ಕರ್ತವ್ಯಗಳಿಗೆ ನಿಯೋಜನೆಗೊಂಡಿದ್ದಾರೆ. ಇನ್ನೂ 500 ಸಿಬ್ಬಂದಿ ಎರಡು ಮೂರು ದಿನಗಳಲ್ಲಿ ಸೇರಿಕೊಳ್ಳುತ್ತಾರೆ. 60 ಸಾವಿರ ಬಿಹಾರ ಪೊಲೀಸರೂ ಚುನಾವಣಾ ಕರ್ತವ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಅವರು ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಹೆಚ್ಚುವರಿಯಾಗಿ 2 ಸಾವಿರ ಮೀಸಲು ಪಡೆಯ ಸಿಬ್ಬಂದಿ, 30 ಸಾವಿರ ಬಿಹಾರದ ವಿಶೇಷ ಸಶಸ್ತ್ರ ಪೊಲೀಸ್, 20 ಸಾವಿರ ಗೃಹ ರಕ್ಷಕ ಸಿಬ್ಬಂದಿ, 19 ಸಾವಿರ ಹೊಸದಾಗಿ ನೇಮಕಗೊಂಡ ಕಾನ್‌ಸ್ಟೆಬಲ್‌ಗಳು ಹಾಗೂ 1.5 ಲಕ್ಷ ಚೌಕಿದಾರ್ (ಸ್ಥಳೀಯ ಪೊಲೀಸ್ ಸಿಬ್ಬಂದಿ) ಚುನಾವಣಾ ಕರ್ತವ್ಯದಲ್ಲಿ ಇರಲಿದ್ದಾರೆ ಎಂದು ತಿಳಿಸಿದ್ದಾರೆ.
ಬಿಹಾರದಲ್ಲಿ ನ. 6 ಮತ್ತು 11 ರಂದು ಚುನಾವಣೆ ನಡೆಯಲಿದ್ದು, 90,712 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ 13,911 ನಗರಗಳಲ್ಲಿ ಮತ್ತು 76,801 ಗ್ರಾಮೀಣ ಪ್ರದೇಶದಲ್ಲಿವೆ.
ಪ್ರತೀ ಜಿಲ್ಲೆಯಲ್ಲೂ ವಿಐಪಿ ಭದ್ರತಾ ಮತಗಟ್ಟೆ ನಿರ್ಮಿಸಲಾಗಿದ್ದು, ವಿಶೇಷ ತರಬೇತಿ ಪಡೆದ ಸಿಬ್ಬಂದಿಯನ್ನು ನೇಮಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.