ADVERTISEMENT

ಬಿಹಾರ ಚುನಾವಣೆ: ಮತ ಎಣಿಕೆಗೆ ಸಕಲ ಸಿದ್ಧತೆ; ಮತ್ತೆ CM ಆಗುವರೇ ನಿತೀಶ್?

ಪಿಟಿಐ
Published 13 ನವೆಂಬರ್ 2025, 8:07 IST
Last Updated 13 ನವೆಂಬರ್ 2025, 8:07 IST
ನಿತೀಶ್,  ತೇಜಸ್ವಿ ಯಾದವ್
ನಿತೀಶ್, ತೇಜಸ್ವಿ ಯಾದವ್   

ಪಟ್ನಾ: ಇತ್ತೀಚೆಗೆ ಕೊನೆಗೊಂಡ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕಾಗಿ ಜನರು ಕುತೂಹಲದಿಂದ ಕಾದಿದ್ದಾರೆ. ಶುಕ್ರವಾರ ನಡೆಯಲಿರುವ ಮತ ಎಣಿಕೆಯಲ್ಲಿ ಮತಗಟ್ಟೆಗಳ ಸಮೀಕ್ಷೆಗಳಂತೆ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ 5ನೇ ಬಾರಿ ಮುಖ್ಯಮಂತ್ರಿ ಗದ್ದುಗೇರಲಿದ್ದಾರೆಯೇ ಅಥವಾ ತೇಜಸ್ವಿ ಯಾದವ್ ನೇತೃತ್ವದ ತೇಜಸ್ವಿ ಯಾದವ್ ಮಹಾಘಟಬಂದನ್‌ ಮ್ಯಾಜಿಕ್ ಮಾಡಲಿದೆಯೇ ಎಂಬುದನ್ನು ಇಡೀ ದೇಶವೇ ಕಾತುರದಿಂದ ಕಾದಿದೆ.

ಈ ಬಾರಿ ಬಿಹಾರ ಚುನಾವಣೆಯಲ್ಲಿ ದಾಖಲೆಯ ಶೇ 67.13ರಷ್ಟು ಮತದಾನವಾಗಿದೆ. ಒಟ್ಟು 243 ಸದಸ್ಯಬಲದ ಬಿಹಾರ ವಿಧಾನಸಭೆಗೆ ನ. 6 ಹಾಗೂ ನ. 11ರಂದು ಎರಡು ಹಂತಗಳಲ್ಲಿ ಮತದಾನ ನಡೆದಿತ್ತು.

ಮತ ಎಣಿಕೆಯು ಶುಕ್ರವಾರ ಬೆಳಿಗ್ಗೆ 8ಕ್ಕೆ ಆರಭವಾಗಲಿದೆ. ಸೋಲು – ಗೆಲುವಿನ ಟ್ರೆಂಡ್ ಬೆಳಿಗ್ಗೆ 9ಕ್ಕೆ ಲಭ್ಯವಾಗಲು ಆರಂಭವಾಗುವ ಸಾಧ್ಯತೆಗಳಿವೆ. ಬಿಹಾರದ 38 ಜಿಲ್ಲೆಗಳಲ್ಲಿ ಒಟ್ಟು 46 ಮತ ಎಣಿಕೆ ಕೇಂದ್ರಗಳನ್ನು ಚುನಾವಣಾ ಆಯೋಗ ತೆರೆದಿದೆ. 

ADVERTISEMENT

ಈ ಬಾರಿ ಚುನಾವಣೆಯಲ್ಲಿ ಮತದಾನಕ್ಕೆ ಒಟ್ಟು 7.45 ಕೋಟಿ ಮತದಾರರು ಅರ್ಹತೆ ಪಡೆದಿದ್ದರು. ಕಣದಲ್ಲಿ 2,616 ಅಭ್ಯರ್ಥಿಗಳಿದ್ದರು. ಮತಗಳು ದಾಖಲಾಗಿರುವ ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿಪ್ಯಾಟ್‌ಗಳನ್ನು ಭದ್ರತಾ ಕೊಠಡಿಯಲ್ಲಿ ಇಟ್ಟು ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

‘ಕೇಂದ್ರ ವೀಕ್ಷಕರು ಮತ್ತು ಅಭ್ಯರ್ಥಿಗಳ ಏಜೆಂಟರ ಸಮ್ಮುಖದಲ್ಲಿ ಮತ ಎಣಿಕೆ ನಡೆಯಲಿದೆ. ಇದರ ಸಂಪೂರ್ಣ ಪ್ರಕ್ರಿಯೆಯನ್ನು ನಿರಂತರ ವಿಡಿಯೊ ಮಾಡಲಾಗುತ್ತದೆ. ಮತ ಎಣಿಕೆ ಕೇಂದ್ರಕ್ಕೆ ಎರಡು ಹಂತಗಳ ಭದ್ರತೆ ಒದಗಿಸಲಾಗಿದೆ. ಅರೆ ಸೇನಾ ಪಡೆ, ರಾಜ್ಯ ಪೊಲೀಸ್ ಜತೆಗೆ 24 ಗಂಟೆಗಳ ಸಿಸಿಟಿವಿ ಕ್ಯಾಮೆರಾಗಳ ನಿಗಾ ಕೂಡಾ ಇರಲಿದೆ’ ಎಂದು ಹೇಳಿದೆ.

ಪ್ರತಿಯೊಂದು ಸ್ಟ್ರಾಂಗ್ ರೂಂ ಇರುವಲ್ಲಿ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ. ಇಲ್ಲಿ ಆಯಾ ಜಿಲ್ಲೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಲಭ್ಯರಿರಲಿದ್ದಾರೆ. ಇವರು ನಿರಂತರವಾಗಿ ಸ್ಟ್ರಾಂಗ್ ರೂಂಗೆ ಭೇಟಿ ನೀಡುತ್ತಲಿರುತ್ತಾರೆ.

ಮತಗಟ್ಟೆ ಸಮೀಕ್ಷೆಯಲ್ಲಿ ಎನ್‌ಡಿಎಗೆ ಬಹುಮತ

ನ. 11ರಂದು ಸಂಜೆ 6ಕ್ಕೆ 2ನೇ ಹಾಗೂ ಕೊನೆಯ ಹಂತದ ಮತದಾನ ಪೂರ್ಣಗೊಂಡ ನಂತರ ವಿವಿಧ ಸಂಸ್ಥೆಗಳು ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳನ್ನು ಪ್ರಕಟಿಸಿದವು. ಇವುಗಳಲ್ಲಿ ಬಹುತೇಕ ಸಮೀಕ್ಷೆಗಳು ಜೆಡಿಯು–ಬಿಜೆಪಿಯ ಎನ್‌ಡಿಎಗೆ ಬಹುಮತ ನೀಡಿವೆ. ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟವು ಆರ್‌ಜೆಡಿ ಪಕ್ಷದ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತ್ತು. ಸಮೀಕ್ಷೆಗಳು ಈ ಬಣಕ್ಕೆ ಬಹುಮತ ಸಿಗುವುದು ಕಷ್ಟ ಎಂದೇ ಹೇಳಿವೆ. ಆದರೂ ಮತದಾರರ ಚಿತ್ತ ಯಾರತ್ತ ಎಂಬುದಕ್ಕೆ ಶುಕ್ರವಾರ ನಡೆಯಲಿರುವ ಮತ ಎಣಿಕೆ ತೆರೆ ಎಳೆಯಲಿದೆ.

ಬಿಹಾರದಲ್ಲಿ ಎನ್‌ಡಿಎ ಬಣದಲ್ಲಿ ಒಟ್ಟು ಐದು ಪಕ್ಷಗಳಿದ್ದು ಜೆಡಿಯು ಮತ್ತು ಬಿಜೆಪಿ ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಿವೆ. 41 ಕ್ಷೇತ್ರಗಳನ್ನು ಉಳಿದ ಪಕ್ಷಗಳಿಗೆ ಬಿಟ್ಟುಕೊಟ್ಟಿವೆ. 

‘ಇಂಡಿಯಾ’ ಒಕ್ಕೂಟದಲ್ಲಿ ಆರ್‌ಜೆಡಿ, ಕಾಂಗ್ರೆಸ್‌, ಸಿಪಿಐ(ಎಂಎಲ್‌), ವಿಕಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಸೇರಿದಂತೆ ಇತರ ಪಕ್ಷಗಳಿವೆ.

ಈ ಬಾರಿ ಕಣದಲ್ಲಿ ಪ್ರಬಲ ಅಭ್ಯರ್ಥಿಗಳಾದ ಡಿಸಿಎಂ ಸಮರ್ಥ ಚೌದರಿ, ವಿಜಯ್ ಕುಮಾರ್ ಸಿನ್ಹಾ, ತೇಜಸ್ವಿ ಯಾದವ್, ತೇಜ್‌ ಪ್ರತಾಪ್‌ ಮತ್ತು ಕಾಂಗ್ರೆಸ್‌ನ ರಾಜೇಶ್ ಕುಮಾರ್ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.