ಪಟ್ನಾ: ಬಿಹಾರ ಚುನಾವಣೆಗೆ ಮುನ್ನ ಎನ್‌ಡಿಎ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಕುರಿತಂತೆ ಅಸಮಾಧಾನ ಸ್ಫೋಟಗೊಂಡಿದೆ. ಆದಾಗ್ಯೂ ಮೈತ್ರಿ ಪಕ್ಷಗಳ ಜೊತೆ ಬಿಜೆಪಿ ನಾಯಕರು ಮಾತುಕತೆ ನಡೆಸುತ್ತಿದ್ದಾರೆ.
ಚಿರಾಗ್ ಪಾಸ್ವಾನ್ ನೇತೃತ್ವದ ಲೊಕ ಜನಶಕ್ತಿ ಪಾರ್ಟಿ(ರಾಮ್ ವಿಲಾಸ್) 40 ಸ್ಥಾನಗಳಿಗೆ ಪಟ್ಟು ಹಿಡಿದ ಬೆನ್ನಲ್ಲೇ ಹಿಂದೂಸ್ತಾನಿ ಅವಾಮ್ ಮೋರ್ಚಾ ಪಕ್ಷ ಕೂಡ 15 ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ. ಈ ಪಕ್ಷವನ್ನು ಕೇಂದ್ರ ಸಚಿವ ಜೀತನ್ ರಾಂ ಮಾಂಝಿ ಮುನ್ನಡೆಸುತ್ತಿದ್ದಾರೆ.
ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಕವಿ ರಾಮಧಾರಿ ಸಿಂಗ್ ದಿನಕರ್ ಕಾವ್ಯದ ಸಾಲುಗಳನ್ನು ಹಂಚಿಕೊಂಡು 15 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದಾರೆ. ನಮಗೆ ಇಷ್ಟು ಸ್ಥಾನಗಳನ್ನು ಕೊಡದಿದ್ದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ, ಆದರೆ ಎನ್‌ಡಿಎ ಮೈತ್ರಿಕೂಟದಲ್ಲಿ ಉಳಿಯುವುದಾಗಿ ಅವರು ಹೇಳಿದ್ದಾರೆ.
ಈ ಮಧ್ಯೆ ಜೆ.ಪಿ. ನಡ್ಡಾ ಅವರು ಜೀತನ್ ರಾಂ ಮಾಂಝಿ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಾವು ಎನ್‌ಡಿಎ ನಾಯಕರನ್ನು ಪ್ರಾರ್ಥಿಸುತ್ತಿದ್ದೇವೆ, ಅವರು ನಮ್ಮನ್ನು ಅವಮಾನಿಸುತ್ತಿದ್ದಾರೆ ಎಂಬ ಭಾವನೆ ನಮ್ಮಲ್ಲಿ ಮೂಡಿದೆ, ಪಕ್ಷಕ್ಕೆ ಕೊಡಬೇಕಾದ ಗೌರವಯುತ ಸ್ಥಾನಗಳನ್ನು ನೀಡಿದರೇ ನಮಗೂ ಮಾನ್ಯತೆ ಸಿಗುತ್ತದೆ. 15 ಸ್ಥಾನಗಳನ್ನು ನೀಡದಿದ್ದರೆ ನಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಆದರೆ ಎನ್‌ಡಿಎಗೆ ಬೆಂಬಲ ನೀಡುತ್ತೇವೆ. ನಾನು ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ಬಯಸುವುದಿಲ್ಲ ಆದರೆ ನಮ್ಮ ಪಕ್ಷವನ್ನು ಗುರುತಿಸಬೇಕು ಎಂಬುದು ನನ್ನ ಬಯಕೆ ಎಂದು ಅವರು ಹೇಳಿದ್ದಾರೆ.
ಮುಂದಿನ ತಿಂಗಳು ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಎನ್‌ಡಿಎ ಮೈತ್ರಿಕೂಟ ಇನ್ನೂ ಸ್ಥಾನ ಹಂಚಿಕೆ ಸೂತ್ರವನ್ನು ಘೋಷಿಸಿಲ್ಲ. ಮೂಲಗಳ ಪ್ರಕಾರ, 243 ಸ್ಥಾನಗಳಲ್ಲಿ ಜನತಾ ದಳ (ಯು) ಮತ್ತು ಬಿಜೆಪಿ ತಲಾ 100 ಸ್ಥಾನಗಳಲ್ಲಿ ಸ್ಪರ್ಧಿಸಬಹುದು. ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿಗೆ 24 ಸ್ಥಾನಗಳು, ಜೀತನ್ ರಾಂ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ ಪಕ್ಷಕ್ಕೆ 10 ಸ್ಥಾನಗಳು ಮತ್ತು ಉಪೇಂದ್ರ ಕುಶ್ವಾಹಾ ಅವರ ಪಕ್ಷಕ್ಕೆ ಸುಮಾರು 6 ಸ್ಥಾನಗಳನ್ನು ನೀಡುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.