
ನಿತೀಶ್ ಕುಮಾರ್
ಪಟ್ನಾ: ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೇ ವೇಳೆ ಜೆಡಿಯು, ಬಿಜೆಪಿಯ 26 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಮೊಹಮ್ಮದ್ ಆರಿಫ್ ಖಾನ್ ಅವರು ಸಿಎಂ ನಿತೀಶ್ ಕುಮಾರ್ ಸೇರಿದಂತೆ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕ ಸಾಮ್ರಾಟ್ ಚೌಧರಿ ಮತ್ತು ಉಪನಾಯಕ ವಿಜಯ್ ಕುಮಾರ್ ಸಿನ್ಹಾ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಬಿಜೆಪಿಯ 14, ಜೆಡಿಯುನ 8, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿಯ (ಆರ್) 2, ಎಚ್‌ಎಎಂ ಮತ್ತು ಆರ್‌ಎಲ್‌ಎಂ ಪಕ್ಷದ ತಲಾ ಒಬ್ಬ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಜೆಡಿಯುನ ವಿಜಯ್ ಕುಮಾರ್ ಚೌಧರಿ, ಬಿಜೇಂದ್ರ ಪ್ರಸಾದ್ ಯಾದವ್, ಶ್ರವಣ್ ಕುಮಾರ್, ಅಶೋಕ್ ಚೌಧರಿ, ಲೆಸಿ ಸಿಂಗ್, ಮದನ್ ಸಾಹ್ನಿ, ಸುನಿಲ್ ಕುಮಾರ್, ಮೊಹಮ್ಮದ್ ಜಮಾ ಖಾನ್ ಅವರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಬಿಜೆಪಿಯ ಸಾಮ್ರಾಟ್ ಚೌಧರಿ, ವಿಜಯ್ ಕುಮಾರ್ ಸಿನ್ಹಾ, ದಿಲೀಪ್ ಜೈಸ್ವಾಲ್, ಮಂಗಲ್ ಪಾಂಡೆ, ಸಂಜಯ್ ಸಿಂಗ್ ಟೈಗರ್, ರಾಮ ನಿಶಾದ್, ಅರುಣ್ ಶಂಕರ್ ಪ್ರಸಾದ್, ರಾಮ್ ಕೃಪಾಲ್ ಯಾದವ್, ನಿತಿನ್ ನಬಿನ್, ಸುರೇಂದ್ರ ಪ್ರಸಾದ್ ಮೆಹ್ತಾ, ನಾರಾಯಣ ಪ್ರಸಾದ್, ಲಖೇಂದ್ರ ಕುಮಾರ್ ರೋಷನ್, ಶ್ರೇಯಾಶಿ ಸಿಂಗ್, ಡಾ.ಪ್ರಮೋದ್ ಕುಮಾರ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇದೇ ವೇಳೆ ಎಲ್‌ಜೆಪಿಯ (ಆರ್) ಸಂಜಯ್ ಕುಮಾರ್ ಸಂಜಯ್ ಕುಮಾರ್ ಸಿಂಗ್, ಎಚ್‌ಎಎಂನ ಸಂತೋಷ್ ಕುಮಾರ್ ಸುಮನ್ ಹಾಗೂ ಆರ್‌ಎಲ್‌ಎಂನ ದೀಪಕ್ ಪ್ರಕಾಶ್ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರು ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡಣವೀಸ್, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಹಲವರು ನಾಯಕರು ಸಮಾರಂಭದಲ್ಲಿ ಭಾಗವಹಿಸಿದ್ದರು.
ನವೆಂಬರ್ 6 ಮತ್ತು 11ರಂದು ನಡೆದ ಎರಡು ಹಂತಗಳ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ–ನಿತೀಶ್ ಕುಮಾರ್ ಜೋಡಿಯ ಪ್ರಭಾವಳಿಯ ನೆರವಿನಿಂದ ಎನ್‌ಡಿಎ ಮೈತ್ರಿಕೂಟವು 243 ಕ್ಷೇತ್ರಗಳ ಪೈಕಿ 203 ಸ್ಥಾನಗಳನ್ನು ಗೆದ್ದು ಬೀಗಿದೆ. ಇತ್ತ ಕಾಂಗ್ರೆಸ್–ಆರ್‌ಜೆಡಿ ನೇತೃತ್ವದ ‘ಮಹಾಘಟಬಂಧನ್’ 34 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಷ್ಟೇ ಶಕ್ತವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.