ಬಿಹಾರದಲ್ಲಿ ನಡೆದ ರ್‍ಯಾಲಿಯಲ್ಲಿ ಪ್ರಧಾನಿ ಮೋದಿ
ಪಿಟಿಐ
ಪಟ್ನಾ: ಬಿಹಾರದ ಗಯಾಜಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡ ರ್‍ಯಾಲಿಯಲ್ಲಿ ಇಬ್ಬರು ಅತೃಪ್ತ ಆರ್‌ಜೆಡಿ ಶಾಸಕರು ಕಾಣಿಸಿಕೊಂಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಊಹಾಪೋಹಗಳಿಗೆ ಪುಷ್ಟಿ ಸಿಕ್ಕಂತಾಗಿದೆ.
ಮಗಧ ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ಮಿಸಲಾದ ವೇದಿಕೆಯಲ್ಲಿ ನವಾದಾ ಶಾಸಕಿ ವಿಭಾ ದೇವಿ ಮತ್ತು ರಾಜೌಲಿ ಶಾಸಕ ಪ್ರಕಾಶ್ ವೀರ್ ಕಾಣಿಸಿಕೊಂಡರು.
ವಿಭಾ ದೇವಿಯ ಪತಿ ರಾಜ್ ಬಲ್ಲಭ್ ಯಾದವ್ ಹಲವು ಬಾರಿ ಗೆದ್ದು ಶಾಸಕರಾಗಿದ್ದರು. ಇತ್ತೀಚೆಗೆ ಪಟ್ನಾ ಹೈಕೋರ್ಟ್ ಪೋಕ್ಸೊ ಪ್ರಕರಣದಲ್ಲಿ ಖುಲಾಸೆಗೊಂಡ ಬಳಿಕ ಜೈಲಿನಿಂದ ಹೊರಬಂದರು. ಅವರು ಹಲವು ವರ್ಷಗಳ ಕಾಲ ಜೈಲಿನಲ್ಲಿದ್ದರು.
ನವಾದಾ ಜಿಲ್ಲೆಯಲ್ಲಿ ಅಪಾರ ಪ್ರಭಾವ ಹೊಂದಿರುವ ಯಾದವ್, ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಕುಟುಂಬದ ಸದಸ್ಯರಿಗೆ ಆರ್‌ಜೆಡಿ ಟಿಕೆಟ್ ನಿರಾಕರಿಸಿದಾಗ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ. ಅವರ ಸಹೋದರ ಬಿನೋದ್ ಯಾದವ್, ಆರ್‌ಜೆಡಿ ತೊರೆದು ನವಾದಾ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಎಸ್‌ಸಿ ಮೀಸಲು ಕ್ಷೇತ್ರದಿಂದ ಸತತ ಎರಡನೇ ಅವಧಿಗೆ ಆಯ್ಕೆಯಾಗಿರುವ ಪ್ರಕಾಶ್ ವೀರ್, ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಹಾಗೂ ತೇಜಸ್ವಿ ಯಾದವ್ ಅವರ ಒಲವು ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.