ADVERTISEMENT

Bihar Polls | ಪ್ರಚಾರಕ್ಕೆ AI ಬಳಕೆ: ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಸಲಹೆ

ಪಿಟಿಐ
Published 25 ಅಕ್ಟೋಬರ್ 2025, 4:27 IST
Last Updated 25 ಅಕ್ಟೋಬರ್ 2025, 4:27 IST
<div class="paragraphs"><p>ಚುನಾವಣಾ ಆಯೋಗ</p></div>

ಚುನಾವಣಾ ಆಯೋಗ

   

ಪಿಟಿಐ ಚಿತ್ರ

ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ರಾಜಕೀಯ ಪಕ್ಷಗಳ ‌ಪ್ರಚಾರದ ಭರಾಟೆ ಜೋರಾಗಿದೆ. ಇದರ ಬೆನ್ನಲ್ಲೇ ರಾಜಕೀಯ ಪಕ್ಷಗಳು ಪ್ರಚಾರಕ್ಕಾಗಿ ಬಳಸುವ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಫೋಟೊ, ಆಡಿಯೊ, ವಿಡಿಯೊದ ದುರುಪಯೋಗ ಕುರಿತಂತೆ ಚುನಾವಣಾ ಆಯೋಗವು ಕೆಲವೊಂದು ಸಲಹೆಗಳನ್ನು ನೀಡಿದೆ.

ADVERTISEMENT

ರಾಜಕೀಯ ಪ್ರತಿಸ್ಪರ್ಧಿಗಳು ಎಐ ಬಳಸಿಕೊಂಡು ತಮ್ಮ ವಿರುದ್ಧ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ ಎಂಬುದರ ಕುರಿತು ವಿವಿಧ ಪಕ್ಷಗಳು ಸಲ್ಲಿಸಿದ ದೂರುಗಳನ್ನು ಆಧರಿಸಿ ಚುನಾವಣಾ ಆಯೋಗವು ಕೆಲವೊಂದು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

2024ರ ಮೇ ಮತ್ತು ಈ ವರ್ಷದ ಜನವರಿಯಲ್ಲಿ ಹೊರಡಿಸಿದ್ದ ಮಾರ್ಗಸೂಚಿಗಳನ್ನೇ ಚುನಾವಣಾ ಆಯೋಗವು ಪುನರುಚ್ಚರಿಸಿದೆ.

ವಿಧಾನಸಭೆ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಎಐ ಆಧರಿಸಿದ ಪ್ರಚಾರ ಸರಕು ಬಳಸುತ್ತಿರುವ ರಾಜಕೀಯ ಪಕ್ಷಗಳು ಪಾರದರ್ಶಕತೆ ಕಾಪಾಡುವ ಜೊತೆಗೆ ಹೊಣೆಗಾರಿಕೆ ಪ್ರದರ್ಶಿಸಬೇಕು ಎಂದು ಆಯೋಗ ಹೇಳಿದೆ.

‘ರಾಜಕೀಯ ನಾಯಕರು ಎಐ ಬಳಸಿಕೊಂಡು ಚುನಾವಣಾ ಸೂಕ್ಷ್ಮ ಸಂದೇಶಗಳನ್ನು ಪ್ರಕಟಿಸುವುದು ಅಥವಾ ಹಂಚಿಕೊಳ್ಳುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಭೀರ ಬೆದರಿಕೆಯೊಡ್ಡಿದಂತಾಗುತ್ತದೆ. ಇದರಿಂದಾಗಿ ಚುನಾವಣಾ ಕಣದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ’ ಎಂದೂ ಆಯೋಗ ತಿಳಿಸಿದೆ.

‘ಯಾವುದೇ ವ್ಯಕ್ತಿಯ ಗುರುತು ಅಥವಾ ಧ್ವನಿಯನ್ನು ಅವರ ಒಪ್ಪಿಗೆಯಿಲ್ಲದೆ ತಪ್ಪಾಗಿ ಪ್ರಕಟಿಸುವುದು, ಮತದಾರರನ್ನು ದಾರಿತಪ್ಪಿಸುವ ಅಥವಾ ಮೋಸಗೊಳಿಸುವ ಯಾವುದೇ ವಿಷಯವನ್ನು ಪ್ರಕಟಿಸಬಾರದು ಅಥವಾ ಹಂಚಿಕೊಳ್ಳಬಾರದು’ ಎಂದು ಆಯೋಗ ಒತ್ತಿ ಹೇಳಿದೆ.

‘ಯಾವುದೇ ಪಕ್ಷದ ಅಧಿಕೃತ ಹ್ಯಾಂಡಲ್‌ಗಳಲ್ಲಿ ಪತ್ತೆಯಾದ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಚಿತ್ರ, ಆಡಿಯೊ ಅಥವಾ ವಿಡಿಯೊ, ತಪ್ಪು ಮಾಹಿತಿಯನ್ನು ಪ್ರಕಟಿಸಿದ ಬಗ್ಗೆ ವರದಿಯಾದ ಮೂರು ಗಂಟೆಯೊಳಗಾಗಿ ಅದನ್ನು ಅಳಿಸಿ ಹಾಕಬೇಕು’ ಎಂದು ಆಯೋಗ ಸೂಚಿಸಿದೆ.

243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನವೆಂಬರ್‌ 6 ಮತ್ತು 11 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ನವೆಂಬರ್‌ 14ರಂದು ಮತ ಎಣಿಕೆ ನಡೆಯಲಿದೆ. ಇದರ ಬೆನ್ನಲ್ಲೇ ಚುನಾವಣಾ ಆಯೋಗವು ಸಂವಿಧಾನದ 324ನೇ ವಿಧಿಯಡಿಯಲ್ಲಿ ತನ್ನ ಅಧಿಕಾರವನ್ನು ಬಳಸಿಕೊಂಡು ರಾಜಕೀಯ ಪಕ್ಷಗಳಿಗೆ ಕೆಲವು ಸಲಹೆಗಳನ್ನು ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.