ತೇಜಸ್ವಿ ಯಾದವ್, ಆರ್‌ಜೆಡಿ ನಾಯಕ
ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಇಂದು (ಬುಧವಾರ) ನಾಮಪತ್ರ ಸಲ್ಲಿಸಿದ್ದಾರೆ.
ತೇಜಸ್ವಿ ಯಾದವ್ ರಾಘೋಪುರ ಕ್ಷೇತ್ರದಿಂದ ಮೂರನೇ ಬಾರಿಗೆ ಕಣಕ್ಕಿಳಿದಿದ್ದು, ಹ್ಯಾಟ್ರಿಕ್ ಗೆಲುವು ಸಾಧಿಸುವ ಗುರಿ ಹೊಂದಿದ್ದಾರೆ.
ಈ ಹಿಂದೆ ರಾಘೋಪುರ ಕ್ಷೇತ್ರದಿಂದ ಯಾದವ್ ಪೋಷಕರು ಸ್ಪರ್ಧಿಸಿದ್ದರು. ಇಬ್ಬರೂ ಬಿಹಾರದ ಮುಖ್ಯಮಂತ್ರಿಯಾಗಿದ್ದರು.
35 ವರ್ಷದ ಯಾದವ್, ವೈಶಾಲಿ ಜಿಲ್ಲೆಯ ಪ್ರಧಾನ ಕಚೇರಿ ಹಾಜಿಪುರದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ತಂದೆ ಲಾಲು ಪ್ರಸಾದ್ ಮತ್ತು ತಾಯಿ ರಾಬ್ರಿ ದೇವಿ ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.
ಈ ವೇಳೆ ಸಂಸದೆ ಮತ್ತು ಸಹೋದರಿ ಮಿಸಾ ಭಾರ್ತಿ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಯಾದವ್ ಸೇರಿದಂತೆ ಆಪ್ತರು ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಪಟ್ನಾದಿಂದ ಹಾಜಿಪುರದವರೆಗೂ ಮೆರವಣಿಗೆ ಮೂಲಕ ಸಾಗಿದ ಯಾದವ್‌ಗೆ ಸಾವಿರಾರು ಕಾರ್ಯಕರ್ತರು ಸಾಥ್ ನೀಡಿದರು.
ಬಿಹಾರ ವಿಧಾನಸಭೆ ಚುನಾವಣೆಯು ನವೆಂಬರ್ 6 ಮತ್ತು 11ರಂದು ನಡೆಯಲಿದೆ. ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.