ADVERTISEMENT

ಬಿಹಾರ ಮಹಿಳೆಯರಿಗೆ ₹10,000: ಮತಕ್ಕಾಗಿ PM ಮೋದಿ ಉಡುಗೊರೆ ಎಂದ ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 11:36 IST
Last Updated 27 ಸೆಪ್ಟೆಂಬರ್ 2025, 11:36 IST
<div class="paragraphs"><p>ನರೇಂದ್ರ ಮೋದಿ ಹಾಗೂ ಜೈರಾಮ್ ರಮೇಶ್&nbsp;</p><p></p></div>

ನರೇಂದ್ರ ಮೋದಿ ಹಾಗೂ ಜೈರಾಮ್ ರಮೇಶ್ 

   

ಪಿಟಿಐ ಚಿತ್ರಗಳು

ADVERTISEMENT

ನವದೆಹಲಿ: ‘ಬಿಹಾರದ 75 ಲಕ್ಷ ಮಹಿಳೆಯರಿಗೆ ಸರ್ಕಾರಿ ಯೋಜನೆಗಳ ಮೂಲಕ ತಲಾ ₹10 ಸಾವಿರ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮತಗಳ್ಳತನದ ಜತೆಗೆ, ಮತ ಖರೀದಿಗೂ ಮುಂದಾಗಿದ್ದಾರೆ’ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ.

ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಸಾಮಾಜಿಕ ಮಾದ್ಯಮ ಎಕ್ಸ್‌ನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದು, ‘ಕರ್ನಾಟಕ ಸರ್ಕಾರವು ರಾಜ್ಯದ 1.3 ಕೋಟಿ ಮಹಿಳೆಯರಿಗೆ ‘ಗೃಹಲಕ್ಷ್ಮಿ‘ಯೋಜನೆಯಡಿ ಮಾಸಿಕ ₹2 ಸಾವಿರ ನೀಡುವುದನ್ನು ಪ್ರಧಾನಮಂತ್ರಿ ಮೋದಿ ಅವರು ಟೀಕಿಸಿದ್ದರು. ಈಗ ಅವರೇ ಈ ಯೋಜನೆಯನ್ನು ಅನುಸರಿಸುತ್ತಿದ್ದಾರೆ’ ಎಂದಿದ್ದಾರೆ.

‘ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಲಿದೆ. ಅದಕ್ಕೂ ಮೊದಲು ಒಂದು ಬಾರಿ ಪಾವತಿಸುವ ಕೊಡುಗೆಯನ್ನು ಪ್ರಧಾನ ಮಂತ್ರಿ ಬಿಹಾರದಲ್ಲಿ ಘೋಷಿಸಿದ್ದಾರೆ. ಮತಗಳ್ಳತನದ ಜತೆಗೆ ಪ್ರಧಾನಿ ಅವರು ಮತಕ್ಕಾಗಿ ಉಡುಗೊರೆಯನ್ನೂ ನೀಡಲು ಮುಂದಾಗಿದ್ದಾರೆ. ಇದು ಹತಾಷೆಯ ಕ್ರಮ ಎಂಬುದು ಸ್ಪಷ್ಟ. ಇವರ ಲೆಕ್ಕಾಚಾರವನ್ನು ಬಿಹಾರ ಮಹಿಳೆಯರು ಚೆನ್ನಾಗಿ ಬಲ್ಲರು’ ಎಂದಿದ್ದಾರೆ.

‘ಬಿಹಾರದಲ್ಲಿ ನಿತೀಶ್ ಕುಮಾರ್‌ ಇತಿಹಾಸ ಸೇರಿದ್ದಾರೆ. ಚುನಾವಣೆ ನಡೆದು, ಫಲಿತಾಂಶ ಬರುತ್ತಿದ್ದಂತೆ ಪ್ರಧಾನಿ ಮೋದಿ ಅವರು ಗತಕಾಲ ಸೇರಲಿದ್ದಾರೆ’ ಎಂದು ಜೈರಾಮ್ ಹೇಳಿದ್ದಾರೆ.

‘ಮುಖ್ಯಮಂತ್ರಿ ಮಹಿಳಾ ರೊಜ್‌ಗಾರ್ ಯೋಜನಾ’ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಘೋಷಿಸಿದರು. ಇದರಡಿ ಸ್ವಂತ ಉದ್ಯೋಗ ಕಂಡುಕೊಳ್ಳುವ ಹಾಗೂ ಜೀವನೋಪಾಯ ಚಟುವಟಿಕೆ ಕೈಗೊಳ್ಳುವ ಮಹಿಳೆಯರಿಗೆ ಒಂದು ಬಾರಿಗೆ ಅನ್ವಯಿಸುವಂತೆ ತಲಾ ₹10 ಸಾವಿರ ನೀಡುವ ಯೋಜನೆಗೆ ಚಾಲನೆ ನೀಡಿದರು.

₹10 ಸಾವಿರದಿಂದ ಆರಂಭವಾಗಿ ಉದ್ಯಮದ ಯಶಸ್ಸನ್ನು ಆಧರಿಸಿ ₹2 ಲಕ್ಷದವರೆಗೂ ಹಣಕಾಸು ನೆರವು ನೀಡುವ ಅವಕಾಶ ಇದರಲ್ಲಿದೆ. ಬಿಹಾರದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಸಂಬಂಧಿಸಿದಂತೆ ಎನ್‌ಡಿಎ ಸರ್ಕಾರ ಘೋಷಿಸಿರುವ ₹75 ಸಾವಿರ ಕೋಟಿ ಯೋಜನೆಯಡಿ ಲಭ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.