ನವದೆಹಲಿ: ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರು ನೀಡಿರುವ ಅವಹೇಳನಕಾರಿ ವಿವಾದಾತ್ಮಕ ಹೇಳಿಕೆಯನ್ನು ಬಿಜೆಪಿ ಹಿರಿಯ ನಾಯಕ ಮುಖ್ತರ್ ಅಬ್ಬಾಸ್ ನಖ್ವಿ ತೀವ್ರವಾಗಿ ಖಂಡಿಸಿದ್ದಾರೆ.
‘ವಿಜಯ್ ಶಾ ಒಬ್ಬ ಮೂರ್ಖ. ಕೆಲವರು ಉತ್ಸಾಹದಲ್ಲಿ ಅರ್ಥ ಇಲ್ಲದಂತೆ ಮಾತನಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಆದೇ ರೀತಿ ಅವರು (ವಿಜಯ್ ಶಾ) ಸೋಫಿಯಾ ಖುರೇಷಿ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ನಗೆಪಾಟಿಲಿಗೀಡಾಗಿದ್ದಾರೆ. ವಿಜಯ್ ಹೇಳಿಕೆ ಸ್ವೀಕಾರಾರ್ಹವಲ್ಲ ಮತ್ತು ಖಂಡನೀಯ’ ಮುಖ್ತರ್ ಅಬ್ಬಾಸ್ ನಖ್ವಿ ಆಕ್ರೋಶ ಹೊರಹಾಕಿದ್ದಾರೆ.
ಸೋಫಿಯಾ ಖುರೇಷಿ ಅವರ ಇಡೀ ಕುಟುಂಬವು ರಾಷ್ಟ್ರೀಯ ಭದ್ರತೆಗೆ ಬದ್ಧವಾಗಿದೆ. ರಾಷ್ಟ್ರೀಯತಾವಾದಿ ಸಂಕಲ್ಪಕ್ಕಾಗಿ ದೇಶವು ಅವರನ್ನು ವಂದಿಸುತ್ತದೆ ಎಂದು ನಖ್ವಿ ತಿಳಿಸಿದ್ದಾರೆ.
‘ಯಾರು ನಮ್ಮ ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದರೊ... ಅವರಿಗೆ ತಕ್ಕ ಪಾಠ ಕಲಿಸಲು ಅವರ ಸಹೋದರಿಯನ್ನೇ ಕಳುಹಿಸಿದೆವು’ ಎಂದು ಕರ್ನಲ್ ಸೋಫಿಯಾ ಖುರೇಷಿ ಅವರ ಕುರಿತು ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನೀಡಿರುವ ಹೇಳಿಕೆಯು ವಿವಾದ ಸೃಷ್ಟಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಮಂಗಳವಾರ ಈ ವಿಡಿಯೊವನ್ನು ಭಾರಿ ಸಂಖ್ಯೆಯಲ್ಲಿ ಹಂಚಿಕೊಳ್ಳಲಾಗುತ್ತಿತ್ತು, ವಿಜಯ್ ಅವರ ವಿರುದ್ಧ ಸಾರ್ವಜನಿಕರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊವನ್ನು ಕಾಂಗ್ರೆಸ್ ಕೂಡ ಹಂಚಿಕೊಂಡಿದ್ದು ತೀವ್ರವಾಗಿ ಟೀಕಿಸಿದೆ.
ವಿಜಯ್ ಶಾ ಅವರು ಮಾತನಾಡಿರುವ ವಿಡಿಯೊವನ್ನು ಕಾಂಗ್ರೆಸ್ ಕೂಡ ಹಂಚಿಕೊಂಡಿದ್ದು ತೀವ್ರವಾಗಿ ಟೀಕಿಸಿದೆ.
‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಮನಃಸ್ಥಿತಿಯು ಎಂದಿಗೂ ಮಹಿಳಾ ವಿರೋಧಿಯೇ ಆಗಿರುತ್ತದೆ. ಉಗ್ರರ ಗುಂಡಿಗೆ ಬಲಿಯಾದ ನೌಕಾಪಡೆಯ ಅಧಿಕಾರಿಯ ಪತ್ನಿಯನ್ನು ಮೊದಲಿಗೆ ಟ್ರೋಲ್ ಮಾಡಲಾಯಿತು. ನಂತರ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಅವರ ಮಗಳನ್ನು ಅವಮಾನಿಸಲಾಯಿತು. ಈಗ ಕರ್ನಲ್ ಸೋಫಿಯಾ ಖುರೇಷಿ ಅವರ ಕುರಿತು ಬಿಜೆಪಿ ಸಚಿವರು ಕೀಳುಮಟ್ಟದಲ್ಲಿ ಮಾತನಾಡುತ್ತಿದ್ದಾರೆ. ಇಂಥ ಸಚಿವನನ್ನು ಪ್ರಧಾನಿ ಮೋದಿ ಅವರು ತಕ್ಷಣವೇ ಅಮಾನತು ಮಾಡಬೇಕು’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.