ರವಿ ಕಿಶನ್
ನವದೆಹಲಿ: ಕೇಂದ್ರ ಸರ್ಕಾರ ಜಿಎಸ್‌ಟಿ ಸರಳೀಕರಣಗೊಳಿಸಿದ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಶೇ 50ರಷ್ಟು ಕಡಿಮೆಯಾಗಿದೆ ಎಂದು ಬಿಜೆಪಿ ಸಂಸದ ರವಿ ಕಿಶನ್ ಅವರು ಮಾತನಾಡಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರಿಂದ ಟ್ರೋಲ್‌ಗೆ ಗುರಿಯಾಗಿದ್ದಾರೆ.
ಬಟ್ಟೆ, ಟಿವಿ, ರೆಫ್ರಿಜರೇಟರ್, ಶಾಂಪೂ, ವಾಷಿಂಗ್ ಮೆಷಿನ್ ಸೇರಿದಂತೆ ಬಹುತೇಕ ಅಗತ್ಯ ವಸ್ತುಗಳ ಬೆಲೆಗಳು ಶೇ 50ರಷ್ಟು ಕಡಿಮೆಯಾಗಿದೆ ಎಂದು ರವಿ ಕಿಶನ್ ಹೇಳಿಕೊಂಡಿದ್ದಾರೆ.
‘ಪ್ರಧಾನಿ ಮೋದಿ ನವರಾತ್ರಿ ಹಬ್ಬದ ಪ್ರಯುಕ್ತ ದೇಶದ ಜನತೆಗೆ ಅದ್ಭುತ ಉಡುಗೊರೆಯನ್ನು ನೀಡಿದ್ದಾರೆ. ಮೋದಿಗೆ ಮತ ಹಾಕದವರು ಕೂಡಾ ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡಿರುವುದು ಸಂತಸ ತರಿಸಿದೆ’ ಎಂದೂ ಕಿಶನ್ ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ರವಿ ಕಿಶನ್ ಮಾತನಾಡಿರುವ ವಿಡಿಯೊವನ್ನು ಹಂಚಿಕೊಂಡು ‘ಬಿಜೆಪಿಗರು ಹಲ್ಲು ಕಿರಿದು ಸುಳ್ಳು ಹೇಳುವುದರಲ್ಲಿ ಸಾರ್ವತ್ರಿಕ ದಾಖಲೆ ನಿರ್ಮಿಸಿದ್ದಾರೆ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಏತನ್ಮಧ್ಯೆ, ಸಾಮಾಜಿಕ ಮಾಧ್ಯಮಗಳು ರವಿ ಕಿಶನ್ ಅವರನ್ನು ‘ಮಹಾನ್ ಗಣಿತಜ್ಞ’ ಎಂದು ಅಪಹಾಸ್ಯ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.