ADVERTISEMENT

ಠಾಣೆ, ನವಿ ಮುಂಬೈ ಪಾಲಿಕೆ ಚುನಾವಣೆ: ಸ್ವತಂತ್ರ ಸ್ಪರ್ಧೆಗೆ ಮುಂದಾದ BJP, ಶಿವಸೇನೆ

ಪಿಟಿಐ
Published 16 ಅಕ್ಟೋಬರ್ 2025, 12:09 IST
Last Updated 16 ಅಕ್ಟೋಬರ್ 2025, 12:09 IST
<div class="paragraphs"><p>ದೇವೇಂದ್ರ ಫಡಣವಿಸ್, ಏಕನಾಥ ಶಿಂದೆ</p></div>

ದೇವೇಂದ್ರ ಫಡಣವಿಸ್, ಏಕನಾಥ ಶಿಂದೆ

   

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್‌ಸಿಪಿ ಜೊತೆ ಅಧಿಕಾರ ಹಂಚಿಕೊಂಡಿರುವ ಬಿಜೆಪಿಯು ಮುಂಬರುವ ಠಾಣೆ ಮತ್ತು ನವಿ ಮುಂಬೈ ಪಾಲಿಕೆಗಳ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಸುಳಿವು ನೀಡಿದೆ.

ಮುಂಬೈನ ಉಪನಗರದಲ್ಲೂ ಏಕಾಂಗಿಯಾಗಿ ಸ್ಪರ್ಧಿಸುವ ಇಂಗಿತವನ್ನು ಬಿಜೆಪಿ ವ್ಯಕ್ತಪಡಿಸಿದ ಬೆನ್ನಲ್ಲೇ, ತಮ್ಮ ಮಿತ್ರ ಪಕ್ಷವಾದ ಏಕನಾಥ ಶಿಂದೆ ನೇತೃತ್ವದ ಶಿವಸೇನೆಯೂ ಏಕಾಂಗಿಯಾಗಿ ಸ್ಪರ್ಧಿಸುವ ಇರಾದೆ ಹೊಂದಿರುವ ಸೂಚನೆ ನೀಡಿದೆ.

ADVERTISEMENT

ಠಾಣೆ ಮಹಾನಗರ ಪಾಲಿಕೆಯ ಅಧಿಕಾರವಾಧಿ 2022ರ ಮಾರ್ಚ್‌ನಲ್ಲಿ ಕೊನೆಗೊಂಡಿದೆ. ನವಿಮುಂಬೈನ ಪಾಲಿಕೆಯ ಅವಧಿ 2020ರ ಮೇನಲ್ಲಿ ಅಂತ್ಯಗೊಂಡಿತ್ತು. ಠಾಣೆ ಪಾಲಿಕೆಯ ಹಿಂದಿನ ಮೇಯರ್‌ ಸ್ಥಾನವನ್ನು ಶಿವಸೇನೆ ಹೊಂದಿತ್ತು. ನವಿಮುಂಬೈನ ಮೇಯರ್‌ ಸ್ಥಾನದಲ್ಲಿ ಎನ್‌ಸಿಪಿಯ ನರೇಶ್ ಮಾಸ್ಕೆ ಇದ್ದರು. ನಂತರ ಇವರು ಬಿಜೆಪಿ ಸೇರಿದರು.

ಪಾಲಿಕೆಯ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಠಾಣೆ ಶಾಸಕ ಇತ್ತೀಚೆಗೆ ಹೇಳಿದ್ದರು. ಒಂದೊಮ್ಮೆ ಸ್ವತಂತ್ರವಾಗಿ ಸ್ಪರ್ಧಿಸಿದರೆ ಮೇಯರ್ ಸ್ಥಾನ ತಮಗೇ ಒಲಿಯುವ ಸಾಧ್ಯತೆಗಳು ಹೆಚ್ಚು ಎಂದಿದ್ದರು. ಇಲ್ಲಿ 70 ವಾರ್ಡ್‌ಗಳಲ್ಲಿ ಗೆಲ್ಲುವ ವಿಶ್ವಾಸವನ್ನು ಬಿಜೆಪಿ ಹೊಂದಿದೆ.

ಶಿವಸೇನೆಯೂ ಇದೇ ಮಾದರಿಯ ಸಿದ್ಧತೆಯಲ್ಲಿದೆ. ಮೈತ್ರಿ ಪಕ್ಷವೇ ಸ್ವತಂತ್ರವಾಗಿ ಸ್ಪರ್ಧಿಸುವ ಉದ್ದೇಶ ಹೊಂದಿರುವಾಗ, ನಾವೇಕೆ ಜತೆಗೂಡಿ ಹೋರಾಡಬೇಕು ಎಂದು ಕಾರ್ಯಕರ್ತರು ಪ್ರಶ್ನಿಸಿದ್ದಾರೆ.

ಇತ್ತೀಚಿನ ಕೆಲ ಬೆಳವಣಿಗೆಯಲ್ಲಿ ಬಿಜೆಪಿ ಮುಖಂಡರ ವಿರುದ್ಧ ಶಿವಸೇನೆ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಶಿವಸೇನೆಯ ಅಭಿವೃದ್ಧಿ ಕಾರ್ಯಕ್ಕೆ ಬಿಜೆಪಿ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ್ದರು.

ಕಳೆದ ಚುನಾವಣೆಯಲ್ಲಿ ಠಾಣೆ ಪಾಲಿಕೆಯಲ್ಲಿ ಶಿವಸೇನೆಯು 67 ವಾರ್ಡ್‌ಗಳಲ್ಲಿ ಗೆದ್ದರೆ, ಬಿಜೆಪಿ 23 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. 

ನವಿಮುಂಬೈ ಪಾಲಿಕೆಯ ಮೇಯರ್ ಸ್ಥಾನ ತನ್ನ ಪಕ್ಷಕ್ಕೆ ಬೇಕು ಎಂದು ಬಿಜೆಪಿ ಇಂಗಿತ ವ್ಯಕ್ತಪಡಿಸಿದೆ. ಇತ್ತೀಚೆಗೆ ನಡೆದ ಕಾರ್ಯತಂತ್ರ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರವೀಂದ್ರ ಚವಾಣ್‌ ಅವರು ಈ ಕುರಿತು ಸ್ಪಷ್ಟ ಯೋಜನೆ ಹೊಂದಿರುವುದಾಗಿ ಹೇಳಿದ್ದರು. ವಾಸ್ತವವನ್ನು ಅರಿತು ನಿರ್ಧಾರ ತೆಗೆದುಕೊಳ್ಳುವಂತೆ ಫಡಣವಿಸ್ ಸಲಹೆ ನೀಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.