
ನವದೆಹಲಿ: ಬಹುಮತವಿಲ್ಲದ ರಾಜ್ಯಗಳಲ್ಲಿ ಬಿಜೆಪಿ ಹೂಡುವ ತಂತ್ರ ಏನೆಂದರೆ ಇತರೆ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುವುದು, ಬಳಿಕ ಆ ರಾಜಕೀಯ ಪಕ್ಷಗಳನ್ನೇ ಅಳವಿನ ಅಂಚಿನಲ್ಲಿಡುವುದು ಎಂದು ಸಂಸದ ಕಪಿಲ್ ಸಿಬಲ್ ಅಭಿಪ್ರಾಯಪಟ್ಟಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಈ ತಂತ್ರ ಬಿಹಾರದಲ್ಲಿ ಯಶಸ್ವಿಯಾಗಿದೆ. ಮಹಾರಾಷ್ಟ್ರದಲ್ಲಿಯೂ ಬಳಸಲಾಗುತ್ತಿದೆ' ಎಂದು ಹೇಳಿದ್ದಾರೆ.
ಅಧಿಕಾರವಿಲ್ಲದ ಅಥವಾ ಬಹುಮತವಿಲ್ಲದ ರಾಜ್ಯಗಳಲ್ಲಿ ಬಿಜೆಪಿ ಹೂಡುವ ತಂತ್ರ ಎಂದರೆ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಬಳಿಕ ಆ ಪಕ್ಷಗಳನ್ನೇ ಅಳವಿನ ಅಂಚಿಗೆ ದೂಡುವುದಾಗಿದೆ ಎಂದು ಸಿಬಲ್ ಹೇಳಿದ್ದಾರೆ.
ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 2,869 ಸ್ಥಾನಗಳ ಪೈಕಿ 1,425 ಸ್ಥಾನಗಳನ್ನು ಗೆದ್ದಿರುವ ಬಿಜೆಪಿಯ, ಮುಂಬೈ ಮತ್ತು ಪುಣೆ ಸೇರಿದಂತೆ 12ಕ್ಕೂ ಹೆಚ್ಚು ಪುರಸಭೆಗಳಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ(ಎನ್‌ಸಿಪಿ) ಶರದ್ ಪವಾರ್ ಬಣ ಮತ್ತು ಅಜಿತ್ ಪವಾರ್ ಬಣ ಮುಂದಿನ ಜಿಲ್ಲಾ ಪರಿಷತ್ ಮತ್ತು ಪಂಚಾಯತ್ ಸಮಿತಿ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಲು ನಿರ್ಧರಿಸಿದೆ.
ಪುಣೆ ನಗರ ಪಾಲಿಕೆ ಚುನಾವಣೆಯಲ್ಲಿ ಎನ್‌ಸಿಪಿಯ ಎರಡು ಬಣಗಳು ತೀವ್ರ ಸೋಲನುಭವಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಮಹಾರಾಷ್ಟ್ರದ 12 ಜಿಲ್ಲಾ ಪರಿಷತ್ ಮತ್ತು 125 ಪಂಚಾಯತ್ ಸಮಿತಿಗಳಿಗೆ ಫೆಬ್ರುವರಿ 5ರಂದು ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.