ADVERTISEMENT

ಸದನದಲ್ಲಿ ಹೇಯ ಕೃತ್ಯ ಎಸಗಿದವರ ಮೇಲೆ ಕ್ರಮ ಆಗಲಿ: ಸ್ಪೀಕರ್‌ಗೆ BJP ಸಂಸದೆಯರ ಪತ್ರ

ಏಜೆನ್ಸೀಸ್
Published 10 ಫೆಬ್ರುವರಿ 2026, 3:12 IST
Last Updated 10 ಫೆಬ್ರುವರಿ 2026, 3:12 IST
<div class="paragraphs"><p>ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಸದಸ್ಯರು ಸ್ಪೀಕರ್‌ ಪೀಠದ ಮುಂದೆ ಪ್ರತಿಭಟನೆ ನಡೆಸಿದರು&nbsp; </p></div>

ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಸದಸ್ಯರು ಸ್ಪೀಕರ್‌ ಪೀಠದ ಮುಂದೆ ಪ್ರತಿಭಟನೆ ನಡೆಸಿದರು 

   

–ಪಿಟಿಐ ಚಿತ್ರ

ನವದೆಹಲಿ: ಸದನದ ಆವರಣದಲ್ಲಿ ಹೇಯ ಕೃತ್ಯಗಳನ್ನು ಎಸಗುವ ಮೂಲಕ ಪ್ರಜಾಪ್ರಭುತ್ವಕ್ಕೆ ಅಪಖ್ಯಾತಿ ತಂದಿರುವ ವಿರೋಧ ಪಕ್ಷದ ಸಂಸದರ ವಿರುದ್ಧ ನಿಯಮಗಳ ಅನ್ವಯ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬಿಜೆಪಿಯ ಮಹಿಳಾ ಸಂಸದರು ಪತ್ರ ಬರೆದಿದ್ದಾರೆ.

ADVERTISEMENT

‘2026ರ ಫೆಬ್ರುವರಿ 4ರಂದು ಗೌರವಾನ್ವಿತ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಮಯದಲ್ಲಿ ಲೋಕಸಭೆಯ ಘನತೆ ಮತ್ತು ಪಾವಿತ್ರ್ಯವನ್ನು ನೀವು ಎತ್ತಿಹಿಡಿದ ಮತ್ತು ರಕ್ಷಿಸಿದ ಅನುಕರಣೀಯ ವಿಧಾನಕ್ಕೆ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಲು ಬಯಸುತ್ತೇವೆ’ ಎಂದು ಬಿಜೆಪಿಯ ಮಹಿಳಾ ಸಂಸದರು ಪತ್ರ ಉಲ್ಲೇಖಿಸಿದ್ದಾರೆ.

‘ಆ ದಿನ ಇಡೀ ರಾಷ್ಟ್ರ ಲೋಕಸಭೆಯಲ್ಲಿ ಅತ್ಯಂತ ದುರದೃಷ್ಟಕರ ಮತ್ತು ವಿಷಾದನೀಯ ಘಟನೆಗಳಲ್ಲಿ ಒಂದನ್ನು ಕಂಡಿತು. ವಿರೋಧ ಪಕ್ಷದ ಸದಸ್ಯರು ಸದನದ ಬಾವಿಗೆ ಪ್ರವೇಶಿಸುವುದಲ್ಲದೆ, ಸ್ಪೀಕರ್ ಮೇಜಿನ ಮೇಲೆ ಹತ್ತುವುದನ್ನು, ಕಾಗದಪತ್ರಗಳನ್ನು ಹರಿದು ಸ್ಪೀಕರ್ ಕಡೆಗೆ ಎಸೆಯುವುದನ್ನು ನಾವು ನೋಡಿದ್ದೇವೆ. ಕೆಲವು ಗೌರವಾನ್ವಿತ ಮಹಿಳಾ ಸದಸ್ಯರು ಆಕ್ರಮಣಕಾರಿಯಾಗಿ ವರ್ತಿಸುತ್ತಾ ಬ್ಯಾನರ್‌ಗಳು ಮತ್ತು ಫಲಕಗಳನ್ನು ಹಿಡಿದು ಪ್ರಧಾನಿ ಮೋದಿಯವರ ಆಸನವನ್ನು ಸುತ್ತುವರೆದಿದ್ದ ದುಃಖಕರ’ ಎಂದಿದ್ದಾರೆ.

‘ಸದನದಲ್ಲಿ ಇಂತಹ ಘೋರ ಕೃತ್ಯಗಳನ್ನು ಎಸಗಿ ಪ್ರಜಾಪ್ರಭುತ್ವಕ್ಕೆ ಅಪಖ್ಯಾತಿ ತಂದ ವಿರೋಧ ಪಕ್ಷದ ಸಂಸದರ ವಿರುದ್ಧ ನಿಯಮಗಳ ಅಡಿಯಲ್ಲಿ ಸಾಧ್ಯವಾದಷ್ಟು ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾವು ನಿಮ್ಮನ್ನು ಒತ್ತಾಯಿಸುತ್ತೇವೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

‘ಪ್ರಧಾನಿ ನರೇಂದ್ರ ಮೋದಿ ಅವರು ಸದನಕ್ಕೆ ಗೈರುಹಾಜರಾಗಿದ್ದು ಬೆದರಿಕೆಯಿಂದಲ್ಲ, ಭಯದಿಂದ. ಅವರಿಗೆ ವಿರೋಧ ಪಕ್ಷಗಳನ್ನು ಎದುರಿಸುವ ಧೈರ್ಯವಿಲ್ಲ’ ಎಂದು ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಕಾಂಗ್ರೆಸ್‌ ಸಂಸದೆಯರು ಸೋಮವಾರ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸಂಸದೆಯರು ಪತ್ರ ಸಮರ ಮುಂದುವರಿಸಿದ್ದಾರೆ.

ಸದನಕ್ಕೆ ಪ್ರಧಾನಿ ಗೈರು ಹಾಜರಿ ಆಗಿರುವ ವಿಚಾರವಾಗಿ ತಮ್ಮ ವಿರುದ್ಧ ಗಂಭೀರ ಆರೋಪ ಮಾಡಿರುವುದನ್ನು ಖಂಡಿಸಿದ್ದ ‘ಕೈ’ ಸಂಸದೆಯರು, ಸ್ಪೀಕರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಸದನದಲ್ಲಿ ನಿಷ್ಪಕ್ಷಪಾತವಾಗಿ ನಡೆದುಕೊಳ್ಳುವಂತೆ ಆಗ್ರಹಿಸಿದ್ದರು.

‘ಪ್ರಧಾನಿ ಮೋದಿ ಅವರ ಗೈರು ಹಾಜರಿಯನ್ನು ಸಮರ್ಥಿಸಿಕೊಳ್ಳಲು ನಿಮ್ಮ (ಬಿರ್ಲಾ) ಮೇಲೆ ಆಡಳಿತ ಪಕ್ಷದ ಒತ್ತಡವಿರುವುದು ಸ್ಪಷ್ಟವಾಗಿದೆ. ಆದ್ದರಿಂದಲೇ ಮಹಿಳಾ ಸಂಸದರ ಮೇಲೆ ಅದರಲ್ಲೂ ಕಾಂಗ್ರೆಸ್‌ ಮಹಿಳಾ ಸಂಸದರ ಮೇಲೆ ನೀವು ಆರೋಪ ಹೊರಿಸಿದ್ದೀರಿ’ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ, ಜ್ಯೋತಿಮಣಿ, ಆರ್. ಸುಧಾ, ವರ್ಷಾ ಗಾಯಕ್ವಾಡ್ ಮತ್ತು ಜ್ಯೋತ್ಸ್ನಾ ಮಹಾಂತ್ ಸೇರಿ ಮಹಿಳಾ ಸಂಸದರು ಸಹಿ ಮಾಡಿದ ಪತ್ರದಲ್ಲಿ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.