ಮುಜಾಫ್ಫರ್‌ನಗರ: ಪಹಲ್ಗಾಮ್ ಭಯೋತ್ಪಾದಕ ದಾಳಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ಮಾಜಿ ನಾಯಕ ರಾಕೇಶ್ ಟಿಕಾಯತ್ ಅವರು ಪಾಲ್ಗೊಂಡಿದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ಶನಿವಾರ ನಗರದಲ್ಲಿ ‘ತುರ್ತು ಕಿಸಾನ್ ಪಂಚಾಯತಿ’ಗೆ ಬಿಕೆಯು ಕರೆ ನೀಡಿದೆ.
ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾದ ನಂತರ ಪೊಲೀಸರು ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದರು. ಘಟನೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಆರ್‌ಎಲ್‌ಡಿ ಶಾಸಕ ರಾಜ್ಪಾಲ್ ಬಲಿಯಾನ್ ಅವರು ಆಗ್ರಹಿಸಿದ್ದಾರೆ.
‘ಮುಜಾಫ್ಫರ್ ನಗರದ ಜಿಐಸಿ ಮೈದಾನದಲ್ಲಿ ಪಂಚಾಯಿತಿ ನಡೆಯಲಿದೆ. ‘ಆಕ್ರೋಶ ರ‍್ಯಾಲಿ’ಯಲ್ಲಿ ನಡೆದ ಘಟನೆಯು ರೈತರ ಚಳವಳಿಯನ್ನು ದುರ್ಬಲಗೊಳಿಸುವ ಉದ್ದೇಶದ ರಾಜಕೀಯ ಪಕ್ಷವೊಂದರ ಪಿತೂರಿಯ ಭಾಗ’ ಎಂದು ಬಿಕೆಯು ರಾಷ್ಟ್ರೀಯ ಅಧ್ಯಕ್ಷ ನರೇಶ್ ಟಿಕಾಯತ್ ಹೇಳಿದರು.
ಘಟನೆ ಏನು?:
ಬಲಪಂಥೀಯ ಸಂಘಟನೆಗಳು ಪಹಲ್ಗಾಮ್ ದಾಳಿ ವಿರುದ್ಧ ಶುಕ್ರವಾರ ಪ್ರತಿಭಟನೆ ಹಮ್ಮಿಕೊಂಡಿದ್ದವು. ಈ ರ‍್ಯಾಲಿಯಲ್ಲಿ ಟಿಕಾಯತ್ ಅವರು ಭಾಗಿಯಾಗಿದ್ದಕ್ಕೆ ವಿರೋಧ ವ್ಯಕ್ತಪಡಿಸಲಾಯಿತು ಮತ್ತು ಹೊರಹೋಗುವಂತೆ ಹೇಳಲಾಯಿತು. ಈ ಸಂದರ್ಭದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿ ಟಿಕಾಯತ್ ಅವರು ಧರಿಸಿದ್ದ ಟರ್ಬನ್ ನೆಲಕ್ಕೆ ಬಿತ್ತು. ಈ ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ರೈತರ ಧ್ವನಿಯನ್ನು ದಮನಗೊಳಿಸಲು ರಾಜಕೀಯ ಪಕ್ಷವೊಂದು ಮಾಡಿರುವ ಪಿತೂರಿ ಇದು. ರ‍್ಯಾಲಿಯನ್ನು ಹಾಳು ಮಾಡಲೆಂದೇ ಕೆಲವು ಯುವಕರನ್ನು ಕಳುಹಿಸಲಾಗಿತ್ತುರಾಕೇಶ್ ಟಿಕಾಯತ್ ರೈತ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.