ADVERTISEMENT

ಬಾಂಬೆ ಹೈಕೋರ್ಟ್‌ ನ್ಯಾಯಾಧೀಶೆಯಾಗಿ BJP ವಕ್ತಾರೆ ನೇಮಕ: ಕಾಂಗ್ರೆಸ್, NCP ಕಿಡಿ

ಏಜೆನ್ಸೀಸ್
Published 6 ಆಗಸ್ಟ್ 2025, 9:41 IST
Last Updated 6 ಆಗಸ್ಟ್ 2025, 9:41 IST
<div class="paragraphs"><p>ನ್ಯಾಯಾಲಯ </p></div>

ನ್ಯಾಯಾಲಯ

   

ಮುಂಬೈ: ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರ ಹುದ್ದೆಗೆ ವಕೀಲರಾದ ಅಜಿತ್ ಭಗವಾನ್‌ರಾವ್ ಕಡೇಹಂಕರ್, ಸುಶೀಲ್ ಮನೋಹರ್ ಘೋಡೇಶ್ವರ್ ಮತ್ತು ಆರತಿ ಅರುಣ್ ಸಾಠೆ ಅವರ ಹೆಸರನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ. ಆದರೆ, ಬಿಜೆಪಿ ವಕ್ತಾರೆಯಾಗಿದ್ದ ಆರತಿ ಸಾಠೆ ಅವರನ್ನು ನ್ಯಾಯಾಧೀಶೆ ಹುದ್ದೆಗೆ ಶಿಫಾರಸು ಮಾಡಿರುವುದಕ್ಕೆ ಕಾಂಗ್ರೆಸ್‌, ಎನ್‌ಸಿಪಿ ಆಕ್ರೋಶ ಹೊರಹಾಕಿವೆ.

ಆರತಿ ಸಾಠೆ ಅವರು ಮಹಾರಾಷ್ಟ್ರ ಬಿಜೆಪಿಯ ಅಧಿಕೃತ ವಕ್ತಾರೆಯಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದ ಬೆನ್ನಲ್ಲೇ ಬಾಂಬೆ ಹೈಕೋರ್ಟ್ ನ್ಯಾಯಾಧೀಶರಾಗಿ ಅವರನ್ನು ನೇಮಕ ಮಾಡಿರುವುದು ಮಹಾರಾಷ್ಟ್ರದಲ್ಲಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

ADVERTISEMENT

ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಶ್ವಾಸಾರ್ಹತೆ ಕಾಪಾಡುವ ಸಲುವಾಗಿ ಸುಪ್ರೀಂ ಕೋರ್ಟ್ ಕೊಲಿಜಿಯಂ ತನ್ನ ಶಿಫಾರಸನ್ನು ಕೂಡಲೇ ಹಿಂಪಡೆಯಬೇಕು ಎಂದು ವಿಪಕ್ಷಗಳು ಒತ್ತಾಯಿಸಿವೆ.

ಆರತಿ ಸಾಠೆ ಅವರು ಬಿಜೆಪಿ ವಕ್ತಾರೆಯಾಗಿ ನೇಮಕಗೊಂಡಿರುವ ಮತ್ತು ಬಾಂಬೆ ಹೈಕೋರ್ಟ್‌ ನ್ಯಾಯಾಧೀಶೆಯಾಗಿ ಅವರನ್ನು ಶಿಫಾರಸು ಮಾಡಿರುವ ಆದೇಶ ಪ್ರತಿಗಳನ್ನು ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್‌ ಪವಾರ್‌ ಅವರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಸಾರ್ವಜನಿಕ ವಲಯದಲ್ಲಿ ಆಡಳಿತ ಪಕ್ಷದ ಪರವಾಗಿ ವಕಾಲತ್ತು ವಹಿಸುವವರನ್ನು ನ್ಯಾಯಾಧೀಶರನ್ನಾಗಿ ನೇಮಿಸುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ಹೊಡೆತ ಬಿದ್ದಂತೆ. ಇಂತಹ ನೇಮಕಾತಿಗಳು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ವಿಶ್ವಾಸಾರ್ಹತೆಯ ಮೇಲೆ ದುಷ್ಟರಿಣಾಮ ಬೀರುತ್ತವೆ’ ಎಂದು ರೋಹಿತ್‌ ಪವಾರ್‌ ಹೇಳಿದ್ದಾರೆ.

‘ನ್ಯಾಯಾಧೀಶೆಯಾಗಲು ಬೇಕಾದ ಅರ್ಹತೆಗಳನ್ನು ಹೊಂದಿರುವುದು ಮತ್ತು ರಾಜಕೀಯವಾಗಿ ಗುರುತಿಸಿಕೊಂಡಿರುವವರನ್ನು ನೇರವಾಗಿ ನ್ಯಾಯಾಧೀಶರನ್ನಾಗಿ ನೇಮಿಸುವುದು ನ್ಯಾಯಾಂಗವನ್ನು ರಾಜಕೀಯ ಕ್ಷೇತ್ರವನ್ನಾಗಿ ಪರಿವರ್ತಿಸುವುದಕ್ಕೆ ಸಮಾನವಲ್ಲವೇ’ ಎಂದು ಪವಾರ್‌ ಪ್ರಶ್ನಿಸಿದ್ದಾರೆ.

‘ರಾಜಕೀಯ ಪಕ್ಷದ ವಕ್ತಾರರನ್ನು ನ್ಯಾಯಾಧೀಶರನ್ನಾಗಿ ನೇಮಿಸುವುದು ಅಧಿಕಾರ ವಿಭಜನೆ ತತ್ವವನ್ನು ದುರ್ಬಲಗೊಳಿಸುತ್ತದೆ. ಜತೆಗೆ, ಸಂವಿಧಾನವನ್ನು ಬುಡಮೇಲು ಮಾಡುವ ಪ್ರಯತ್ನವಾಗುತ್ತದೆ. ಹೈಕೋರ್ಟ್‌ ನ್ಯಾಯಾಧೀಶೆಯಾಗಿ ನೇಮಕಗೊಂಡವರು (ಆರತಿ ಸಾಠೆ) ರಾಜಕೀಯ ಹಿನ್ನೆಲೆಯನ್ನು ಹೊಂದಿದ್ದು, ಆಡಳಿತ ಪಕ್ಷದಲ್ಲಿ ಸ್ಥಾನವನ್ನು ಹೊಂದಿದ್ದರೆ, ನ್ಯಾಯ ನೀಡುವ ಪ್ರಕ್ರಿಯೆಯು ರಾಜಕೀಯ ಪಕ್ಷಪಾತದಿಂದ ಕಳಂಕಿತವಾಗುವುದಿಲ್ಲ ಎಂದು ಯಾರು ಖಾತರಿಪಡಿಸುತ್ತಾರೆ’ ಎಂದು ಪವಾರ್‌ ವಾಗ್ದಾಳಿ ನಡೆಸಿದ್ದಾರೆ.

‘ಹೈಕೋರ್ಟ್‌ ನ್ಯಾಯಾಧೀಶೆಯಾಗಿ ನೇಮಕಗೊಂಡವವರ (ಆರತಿ ಸಾಠೆ) ಅರ್ಹತೆಯ ಬಗ್ಗೆ ಯಾವುದೇ ಆಕ್ಷೇಪಣೆ ಇಲ್ಲ. ಆದರೆ, ಅಂತವರ ನೇಮಕಾತಿಯಿಂದ ಯಾವುದೇ ಪಕ್ಷಪಾತವಿಲ್ಲದೆ ನ್ಯಾಯ ದೊರೆಯುತ್ತದೆ ಎಂಬ ನಾಗರಿಕರ ಭಾವನೆಗೆ ಧಕ್ಕೆ ತಂದಂತಾಗುತ್ತದೆ’ ಎಂದು ಅವರು ದೂರಿದ್ದಾರೆ.

‘ಬಾಂಬೆ ಹೈಕೋರ್ಟ್ ನ್ಯಾಯಾಧೀಶೆಯಾಗಿ ಆರತಿ ಸಾಠೆ ಅವರ ನೇಮಕಾತಿಯನ್ನು ಮರುಪರಿಶೀಲಿಸಬೇಕು. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಈ ವಿಷಯದ ಬಗ್ಗೆ ನಿರ್ದೇಶನ ನೀಡಬೇಕು’ ಎಂದು ಪವಾರ್ ಒತ್ತಾಯಿಸಿದ್ದಾರೆ.

ಬಿಜೆಪಿ ಪ್ರತಿಕ್ರಿಯೆ: ಆರತಿ ಸಾಠೆ ಅವರು ಮಹಾರಾಷ್ಟ್ರ ಬಿಜೆಪಿಯ ವಕ್ತಾರೆಯಾಗಿದ್ದರು ಎಂಬುದು ನಿಜ. ಆದರೆ, ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶೆಯಾಗಿ ನೇಮಕಗೊಳ್ಳುವ ಮೊದಲೇ ಅವರು ಪಕ್ಷದ ವಕ್ತಾರೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದು ಮಹಾರಾಷ್ಟ್ರ ಬಿಜೆಪಿ ಮಾಧ್ಯಮ ವಿಭಾಗದ ಉಸ್ತುವಾರಿ ನವನಾಥ್ ಬಾಂಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.