ADVERTISEMENT

ಮಹಿಳೆ ಸಾವಿನ ಪ್ರಕರಣಕ್ಕೆ ಅನಗತ್ಯ ಪ್ರಚಾರ ಬೇಡ: ಬಾಂಬೆ ಹೈಕೋರ್ಟ್‌

ಪಿಟಿಐ
Published 5 ಮಾರ್ಚ್ 2021, 7:19 IST
Last Updated 5 ಮಾರ್ಚ್ 2021, 7:19 IST
ಬಾಂಬೆ ಹೈಕೋರ್ಟ್‌
ಬಾಂಬೆ ಹೈಕೋರ್ಟ್‌   

ಮುಂಬೈ: ‘ಪುಣೆ ಮಹಿಳೆಯ ಸಾವಿನ ಪ್ರಕರಣದ ಬಗ್ಗೆ ಮಾಧ್ಯಮಗಳು ಅನಗತ್ಯ ಪ್ರಚಾರ ಮಾಡಬಾರದು’ ಎಂದು ಬಾಂಬೆ ಹೈಕೋರ್ಟ್‌ ಸೂಚನೆ ನೀಡಿದೆ.

ಇತ್ತೀಚೆಗೆ ಪುಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯು, ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ವರದಿಗಳ ವಿರುದ್ಧ ಸಂತ್ರಸ್ತೆ ತಂದೆ,ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

‘ಫೆಬ್ರುವರಿ 8 ರಂದು ನನ್ನ ಮಗಳು ಬಾಲ್ಕನಿಯಿಂದ ಕೆಳಗೆ ಬಿದ್ದಿದ್ದಳು. ಅವಳನ್ನು ನಾವು ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮಗಳು ಆಸ್ಪತ್ರೆಯಲ್ಲೇ ಕೊನೆ ಉಸಿರೆಳೆದಳು. ಮಾಧ್ಯಮಗಳು ನನ್ನ ಮಗಳ ಸಾವಿನ ಬಗ್ಗೆ ತಪ್ಪು ವರದಿ ಮಾಡಿವೆ. ಅಲ್ಲದೆ ಆಕೆ ಅನೈತಿಕ ಸಂಬಂಧವನ್ನು ಹೊಂದಿದ್ದಳು ಎಂದು ಆರೋಪಿಸಿವೆ’ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಸಂತ್ರಸ್ತೆಯದ್ದು ಎನ್ನಲಾಗಿರುವ 9 ಫೋನ್‌ ಆಡಿಯೊ ಕ್ಲಿಪ್‌ ಅನ್ನು ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳು ಹಂಚಿಕೊಂಡಿವೆ. ಈ ನಡೆಯು ಮಾನಹಾನಿಕರ ಮತ್ತು ಅವಹೇಳನಕಾರಿಯಾಗಿದೆ’ ಎಂದು ಸಂತ್ರಸ್ತೆಯ ತಂದೆ ‍‍ಪರ ವಕೀಲರಾದ ಶಿರೀಶ್ ಗುಪ್ಟೆ ಅವರು ವಾದಿಸಿದರು.

ಈ ಅರ್ಜಿ ಸಂಬಂಧ ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌.ಎಸ್‌ ಶಿಂದೆ ಮತ್ತು ಮನೀಶ್‌ ಪಿತಾಲೆ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಪ್ರಕರಣದ ಬಗ್ಗೆ ಅನಗತ್ಯ ಪ್ರಚಾರ ಮಾಡದಂತೆ ಮಾಧ್ಯಮಗಳಿಗೆ ಸೂಚನೆ ನೀಡಿದೆ. ಅಲ್ಲದೆ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ಸಾವಿನ ಪ್ರಕರಣದಲ್ಲಿ ಮಾಧ್ಯಮಗಳಿಗಾಗಿ ಬಿಡುಗಡೆ ಮಾಡಿರುವ ಮಾರ್ಗಸೂಚಿಯನ್ನು ಪಾಲಿಸುವಂತೆ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.