ಕುನಾಲ್ ಕಾಮ್ರಾ
ಮುಂಬೈ: ಟಿಕೆಟ್ ಬುಕ್ಕಿಂಗ್ ವೇದಿಕೆಯಾದ ‘ಬುಕ್‌ಮೈಶೋ’ ತನ್ನ ಕಾರ್ಯಕ್ರಮಗಳ ಪಟ್ಟಿಯಿಂದ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರ ಕಾರ್ಯಕ್ರಮಗಳನ್ನು ಕೈಬಿಟ್ಟಿದೆ.
ಜತೆಗೆ, ತನ್ನ ವೆಬ್‌ಸೈಟ್ ಮತ್ತು ಆ್ಯಪ್‌ನಲ್ಲಿದ್ದ ಕಾಮ್ರಾ ಅವರ ಕುರಿತಾದ ಎಲ್ಲ ವಿವರಗಳನ್ನು ಶನಿವಾರ ಅಳಿಸಿ ಹಾಕಿದೆ. ಈ ಬಗ್ಗೆ ಶಿವಸೇನಾದ ರಾಹುಲ್ ಕನಾಲ್ ಅವರು ‘ಬುಕ್‌ಮೈಶೋ’ಗೆ ಪತ್ರ ಬರೆದು ಧನ್ಯವಾದ ತಿಳಿಸಿದ್ದಾರೆ.
‘ಕಾಮ್ರಾ ಅವರಿಗೆ ‘ಬುಕ್‌ಮೈಶೋ’ ತನ್ನ ವೇದಿಕೆಯಲ್ಲಿ ಅವಕಾಶ ನೀಡಬಾರದು’ ಎಂದು ಒತ್ತಾಯಿಸಿ, ಶಿವಸೇನಾದ ಸಾಮಾಜಿಕ ಜಾಲತಾಣ ಉಸ್ತುವಾರಿ ರಾಹುಲ್ ಅವರು ‘ಬುಕ್‌ಮೈಶೋ’ನ ಸಿಇಒ ಆಶೀಶ್ ಹೇಮರಾಜನಿ ಅವರಿಗೆ ಪತ್ರ ಬರೆದಿದ್ದರು. ಪತ್ರ ಬರೆದ ಒಂದು ದಿನದಲ್ಲಿ ‘ಬುಕ್‌ಮೈಶೋ’ ಈ ಕ್ರಮ ಕೈಗೊಂಡಿದೆ. ‘ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಲು ‘ಬುಕ್‌ಮೈಶೋ’ ನಿರಾಕರಿಸಿದೆ.
‘ಕಾಮ್ರಾ ಅವರ ಕಾರ್ಯಕ್ರಮಗಳನ್ನು ನಿಮ್ಮ ಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ, ಅವರಿಗೆ ನೀಡಲಾಗುತ್ತಿದ್ದ ಪ್ರಚಾರಕ್ಕೆ ತಡೆ ನೀಡಿದ್ದಕ್ಕೆ ಮತ್ತು ನಿಮ್ಮ ವೇದಿಕೆಯ ಹುಡುಕಾಟದ ಇತಿಹಾಸದಿಂದ ಅವರ ಹೆಸರನ್ನು ಅಳಿಸಿ ಹಾಕಿದ್ದಕ್ಕೆ ನಾವು ನಿಮಗೆ ಆಭಾರಿಯಾಗಿದ್ದೇವೆ. ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದರ ಬಗ್ಗೆ ನಿಮಗಿರುವ ಬದ್ಧತೆ ಮತ್ತು ನಮ್ಮ ಭಾವನೆಗಳಿಗೆ ಸ್ಪಂದಿಸಿದ್ದಕ್ಕೆ ನಿಮಗೆ ಧನ್ಯವಾದಗಳು’ ಎಂದು ರಾಹುಲ್ ಅವರು ಆಶೀಶ್ ಅವರಿಗೆ ಪತ್ರ ಬರೆದಿದ್ದಾರೆ.
ವಿಚಾರಣೆಗೆ ಗೈರು: ಕುನಾಲ್ ಕಾಮ್ರಾ ಅವರು ತಮ್ಮ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಉದ್ದೇಶಿಸಿ ‘ದ್ರೋಹಿ’ ಎಂದು ಹಾಡು ಹಾಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ, ಕಾಮ್ರಾ ಅವರು ಪೊಲೀಸರ ವಿಚಾರಣೆ ಶನಿವಾರವೂ ಹಾಜರಾಗಲಿಲ್ಲ. ಮುಂಬೈ ಪೊಲೀಸರು ಕಾಮ್ರಾ ಅವರಿಗೆ ಒಟ್ಟು ಮೂರು ಸಮನ್ಸ್ ನೀಡಿದ್ದರು. ಮೂರು ಬಾರಿಗೂ ಕಾಮ್ರಾ ಅವರು ವಿಚಾರಣೆಗೆ ಹಾಜರಾಗಲಿಲ್ಲ.
ಹೆಲೋ ‘ಬುಕ್‌ಮೈಶೋ’. ಈ ಸುದ್ದಿಯನ್ನು ದೃಢೀಕರಿಸಿ. ನನ್ನ ಕಾರ್ಯಕ್ರಮಗಳನ್ನು ನಿಮ್ಮ ವೇದಿಕೆಯಲ್ಲಿ ನಾನು ಪಟ್ಟಿ ಮಾಡಬಹುದೇ ಅಥವಾ ಇಲ್ಲವೆ? ಪಟ್ಟಿ ಮಾಡುವಂತಿಲ್ಲ ಎಂದರೆ ಅಭ್ಯಂತರವೇನೂ ಇಲ್ಲ. ನನಗೆ ಎಲ್ಲ ಅರ್ಥವಾಗುತ್ತದೆ...––ಕುನಾಲ್ ಕಾಮ್ರಾ, ಹಾಸ್ಯ ಕಲಾವಿದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.