ADVERTISEMENT

ಟರ್ಕಿ ಸೇಬಿಗೆ ಬಹಿಷ್ಕಾರ ಬಿಸಿ: ಕಾಶ್ಮೀರ ಸೇಬು ಉದ್ಯಮಕ್ಕೆ ಮೂಡಿತು ಭರವಸೆಯ ಬೆಳಕು

ಝುಲ್ಫಿಕರ್ ಮಜಿದ್
Published 17 ಮೇ 2025, 10:09 IST
Last Updated 17 ಮೇ 2025, 10:09 IST
<div class="paragraphs"><p>ಕಾಶ್ಮೀರದ ಸೇಬು</p></div>

ಕಾಶ್ಮೀರದ ಸೇಬು

   

–ಪಿಟಿಐ ಚಿತ್ರ

ಶ್ರೀನಗರ: ಭಾರತ ವಿರುದ್ಧದ ದಾಳಿಯಲ್ಲಿ ಪಾಕಿಸ್ತಾನ ಬಳಸಿರುವ ಡ್ರೋನ್‌ಗಳನ್ನು ಟರ್ಕಿ ದೇಶವು ಪೂರೈಸಿದೆ. ಅಲ್ಲದೆ, ಪಾಕಿಸ್ತಾನವನ್ನು ಅಜರ್‌ಬೈಜಾನ್‌ ಬೆಂಬಲಿಸಿದೆ. ಹಾಗಾಗಿ, ಈ ಎರಡು ದೇಶಗಳ ಪ್ರವಾಸೋದ್ಯಮಕ್ಕೂ ನಿರ್ಬಂಧ ಹೇರಬೇಕು ಹಾಗೂ ಆಮದಾಗುವ ಸರಕುಗಳಿಗೆ ಕೇಂದ್ರ ಸರ್ಕಾರವು ಬಹಿಷ್ಕಾರ ಹೇರಬೇಕು ಎಂಬ ಕೂಗು ಜೋರಾಗಿದೆ.

ADVERTISEMENT

ಮತ್ತೊಂದೆಡೆ ಟರ್ಕಿಯಿಂದ ಭಾರತಕ್ಕೆ ಪ್ರಮುಖವಾಗಿ ಪೂರೈಕೆಯಾಗುವ ಸೇಬು ಮತ್ತು ಅಮೃತ ಶಿಲೆಯನ್ನು (ಮಾರ್ಬಲ್‌) ವರ್ತಕರ ವಲಯವು ಬಹಿಷ್ಕರಿಸಿದೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ ಟರ್ಕಿ ಸೇಬಿಗೆ ಬಹಿಷ್ಕಾರ ಬಿಸಿ ತಟ್ಟಿದೆ. ಇತ್ತ ಸಂಕಷ್ಟದಲ್ಲಿರುವ ಕಾಶ್ಮೀರದ ಸೇಬು ಉದ್ಯಮಕ್ಕೆ ಭರವಸೆಯ ಬೆಳಕು ಮೂಡಿದಂತಾಗಿದೆ.

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿ ಖಂಡಿಸಿ ಭಾರತವು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ನಡೆಸಿದ ದಾಳಿಯಲ್ಲಿ ಟರ್ಕಿ ತಯಾರಿಸಲಾದ ಡ್ರೋನ್‌ಗಳನ್ನು ಬಳಸಲಾಗಿತ್ತು. ಭಾರತೀಯ ಸೇನೆಯು ಈ ಡ್ರೋನ್‌ಗಳು ಹೊಡೆದುರುಳಿಸಿತ್ತು.

ಪಾಕಿಸ್ತಾನಕ್ಕೆ ಟರ್ಕಿ ಬೆಂಬಲ ನೀಡಿರುವುದು ಭಾರತೀಯ ವ್ಯಾಪಾರಿಗಳು ಮತ್ತು ಗ್ರಾಹಕರಲ್ಲಿ ಬಲವಾದ ರಾಷ್ಟ್ರೀಯತಾವಾದಿ ಭಾವನೆಯನ್ನು ಕೆರಳಿಸಿದೆ. ಇದರ ಪರಿಣಾಮವಾಗಿ ಭಾರತದ ಪ್ರಮುಖ ಹಣ್ಣಿನ ಮಂಡಿಗಳು ಟರ್ಕಿ ಸೇಬು ಖರೀದಿಸಲು ನಿರಾಕರಿಸಿವೆ ಎಂದು ವರದಿಯಾಗಿದೆ.

ಕಾಶ್ಮೀರದಲ್ಲಿ ಶೇ 75ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೇಬುಗಳನ್ನು ಬೆಳೆಯಲಾಗುತ್ತದೆ. ಇದೀಗ ಟರ್ಕಿ ಸೇಬಿಗೆ ಬಹಿಷ್ಕಾರ ಬಿಸಿ ತಟ್ಟಿರುವುದರಿಂದ ಕಾಶ್ಮೀರದ ಸೇಬಿಗೆ ಬೇಡಿಕೆ ಹೆಚ್ಚಾಗಿ, ಲಾಭ ಸಿಗಬಹುದು ಎಂಬುದು ಸ್ಥಳೀಯ ಬೆಳೆಗಾರರ ನಿರೀಕ್ಷೆಯಾಗಿದೆ.

‘ಕಾಶ್ಮೀರ ಸೇಬು ಆಮದು ಮಾಡಿಕೊಂಡ ಸೇಬುಗಳಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ. ಇದು ಕಾಶ್ಮೀರದಲ್ಲಿ ಹಣ್ಣು ಬೆಳೆಗಾರರಿಗೆ ಕಡಿಮೆ ಆದಾಯಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರವು ಟರ್ಕಿ ಸೇಬು ಆಮದನ್ನು ನಿಷೇಧಿಸಿದರೆ, ಅದು ನಮ್ಮ ಉತ್ಪನ್ನಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ’ ಎಂದು ಕಾಶ್ಮೀರ ಕಣಿವೆಯ ಹಣ್ಣು ಬೆಳೆಗಾರರ ​​ಒಕ್ಕೂಟದ ಅಧ್ಯಕ್ಷ ಬಶೀರ್ ಅಹ್ಮದ್ ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಕಾಶ್ಮೀರದಾದ್ಯಂತ ರೈತರ ಲಾಭ ಕುಸಿಯುತ್ತಿದೆ. ಆಮದು ಮಾಡಿಕೊಂಡ ಟರ್ಕಿ ಸೇಬುಗಳು ಹೆಚ್ಚಾಗಿ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿವೆ. ಆದ್ಯತೆಯ ವ್ಯಾಪಾರ ವ್ಯವಸ್ಥೆ ಅಡಿಯಲ್ಲಿ ಭಾರತೀಯ ಬಂದರುಗಳಿಗೆ ಸಾಗಾಣೆಯಾಗುವ ಟರ್ಕಿ ಸೇಬುಗಳು ನಮ್ಮ ಮಾರುಕಟ್ಟೆಯನ್ನು ದುರ್ಬಲಗೊಳಿಸಿವೆ ಎಂದು ಬಶೀರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.