ADVERTISEMENT

‘ಗ್ಯಾರಂಟಿ ಕಾರ್ಡ್‌’ಗೆ ಪ್ರತಿಯಾಗಿ ಬಿಆರ್‌ಎಸ್‌ನಿಂದ ‘ಡೆಟ್‌ ಕಾರ್ಡ್‌’ ಅಭಿಯಾನ

ಪಿಟಿಐ
Published 27 ಸೆಪ್ಟೆಂಬರ್ 2025, 9:36 IST
Last Updated 27 ಸೆಪ್ಟೆಂಬರ್ 2025, 9:36 IST
Shwetha Kumari
   Shwetha Kumari

ಹೈದರಾಬಾದ್‌: ಸಮಾಜದ ವಿವಿಧ ವರ್ಗಗಳಿಗೆ ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್‌ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ.ಟಿ.ರಾಮ್‌ರಾವ್, ಪಕ್ಷದ ಮುಖಂಡರ ಸಮ್ಮುಖದಲ್ಲಿ ‘ಕಾಂಗ್ರೆಸ್‌ ಡೆಟ್‌ ಕಾರ್ಡ್‌’ (ಸಾಲ ಬಾಕಿ ಕಾರ್ಡ್‌) ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆಟಿಆರ್‌, ಚುನಾವಣೆಗೂ ಮುನ್ನ ಕಾಂಗ್ರೆಸ್‌ ನೀಡಿದ ಸುಳ್ಳು ಭರವಸೆಗಳು ಈಗ ಜನರ ಕೈಯಲ್ಲಿ ಅಸ್ತ್ರವಾಗಿ ಮಾರ್ಪಟ್ಟಿವೆ ಎಂದರು.

ಮುಂಬರುವ ಪಂಚಾಯತ್ ಮತ್ತು ಜುಬಲಿ ಹಿಲ್ಸ್‌ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವಂತೆ ರಾಜ್ಯದ ಜನತೆಗೆ ಒತ್ತಾಯಿಸಿದರು.

ADVERTISEMENT

‘ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ಗೆ ‍ಪ್ರತಿಯಾಗಿ ಡೆಟ್‌ ಕಾರ್ಡ್‌ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಈ ಕಾರ್ಡ್‌ಗಳನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ಪಕ್ಷದ ನಾಯಕರು, ಕಾರ್ಯಕರ್ತರು ಮಾಡಲಿದ್ದಾರೆ. ಆ ಮೂಲಕ ಈಡೇರಿಸದ ಭರವಸೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಿದ್ದೇವೆ’ ಎಂದು ಹೇಳಿದರು.

ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬಂದರೆ ‘ರೈತ ಬಂಧು’ ನಂತಹ ಕಲ್ಯಾಣ ಯೋಜನೆಗಳನ್ನು ರದ್ದುಗೊಳಿಸುವ ಸಾಧ್ಯತೆಯಿದೆ ಎಂದು ಕೆಟಿಆರ್ ಆರೋಪಿಸಿದರು.

‘ಕಾಂಗ್ರೆಸ್‌ನ ಕೆಟ್ಟ ಆಡಳಿತದಿಂದ ರಾಜ್ಯದ ರೈತರು, ಮಹಿಳೆಯರು, ಯುವಕರು, ನಿರುದ್ಯೋಗಿಗಳು, ವೃದ್ಧರು ಸೇರಿ ಪ್ರತಿಯೊಂದು ಸಮುದಾಯದ ಸ್ಥಿತಿ ಶೋಚನೀಯವಾಗಿದೆ. ಜನರ ಸಮಸ್ಯೆ ಆಲಿಸಬೇಕಾದ ಸರ್ಕಾರ, ಬಿಆರ್‌ಎಸ್‌ ಪಕ್ಷದ ನಾಯಕರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಸೇಡಿನ ರಾಜಕಾರಣ ಮಾಡುತ್ತಿದೆ’ ಎಂದು ಅಸಮಾಧಾನ ಹೊರಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.