ಕಾಂಗ್ರೆಸ್
(ಪಿಟಿಐ ಚಿತ್ರ)
ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ವಿರುದ್ಧ ಬಿಆರ್‌ಎಸ್ ಪಕ್ಷದ ನಾಯಕರೊಬ್ಬರು ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿರುವ ಕಾಂಗ್ರೆಸ್ ಕಾರ್ಯಕರ್ತರು, ಭೋಂಗಿರ್‌ನಲ್ಲಿರುವ ಬಿಆರ್‌ಎಸ್ ಪಕ್ಷದ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ.
ಬಿಆರ್‌ಎಸ್ ಮುಖಂಡ ರಾಮಕೃಷ್ಣ ರೆಡ್ಡಿ ಅವರು ಹೈದರಾಬಾದ್‌ನಿಂದ 50 ಕಿ.ಮೀ ದೂರದಲ್ಲಿರುವ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ರೇವಂತ್ ರೆಡ್ಡಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರತೀಕಾರವಾಗಿ ಕಾಂಗ್ರೆಸ್ ಕಾರ್ಯಕರ್ತರು ಬಿಆರ್‌ಎಸ್ ಕಚೇರಿಯಲ್ಲಿದ್ದ ಪೀಠೋಪಕರಣಗಳು ಮತ್ತು ಇತರ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರನ್ನು ಚದುರಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಘಟನೆ ಖಂಡಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್, ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
‘ಕೆಲವು ದಿನಗಳ ಹಿಂದೆ ನಡೆದ ಪ್ರತಿಭಟನೆಯ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಕಲ್ಲು ತೂರಾಟ ನಡೆಸಿದ್ದರು. ಇದೀಗ ಯಾದಾದ್ರಿ ಭುವನಗಿರಿಯಲ್ಲಿರುವ ನಮ್ಮ ಪಕ್ಷದ ಕಚೇರಿ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ವಿಪಕ್ಷಗಳ ಕಚೇರಿಗಳ ಮೇಲೆ ದಾಳಿ ಮಾಡುವುದು ಕಾಂಗ್ರೆಸ್‌ಗೆ ವಾಡಿಕೆಯಾಗಿದೆ’ ಎಂದು ರಾಮರಾವ್ ಟೀಕಿಸಿದ್ದಾರೆ.
‘ಇಂದಿರಮ್ಮ ರಾಜ್ಯ’ (ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕಲ್ಯಾಣ ಆಡಳಿತ) ಭರವಸೆಯ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ, ಅದು ಈಗ ‘ಗೂಂಡಾ ರಾಜ್ಯ’ವಾಗಿದೆ ಎಂದು ರಾಮರಾವ್ ಕಿಡಿಕಾರಿದ್ದಾರೆ.
ಬಿಆರ್‌ಎಸ್ ಮುಖಂಡ ರಾಮಕೃಷ್ಣ ರೆಡ್ಡಿ ಮತ್ತು ಮಾಜಿ ಶಾಸಕ ಪೈಲ್ಲಾ ಶೇಖರ್ ರೆಡ್ಡಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೆ ಕಾಂಗ್ರೆಸ್ ಗೂಂಡಾಗಳನ್ನು ಕಳುಹಿಸಿ ದಾಳಿ ನಡೆಸಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.