ADVERTISEMENT

ರೈಲುಗಳಲ್ಲೇ ಲೋಪವಿದ್ದಾಗ ಬುಲೆಟ್‌ ರೈಲಿನ ಮಾತೇಕೆ: BJP ಮುಖಂಡನ ಪುತ್ರನ ಪ್ರಶ್ನೆ

ಪಿಟಿಐ
Published 9 ಸೆಪ್ಟೆಂಬರ್ 2025, 11:29 IST
Last Updated 9 ಸೆಪ್ಟೆಂಬರ್ 2025, 11:29 IST
<div class="paragraphs"><p>ಸಂಗಮಿತ್ರ ಭಾರ್ಗವ</p></div>

ಸಂಗಮಿತ್ರ ಭಾರ್ಗವ

   

ಇಂದೋರ್: 2022ರಲ್ಲಿ ಬುಲೆಟ್‌ ರೈಲು ಕುರಿತು ಪ್ರಸ್ತಾಪಿಸಲಾಗಿತ್ತು. ಅಹಮದಾಬಾದ್‌ ಹಾಗೂ ಮುಂಬೈನ ನಡುವೆ ಈ ರೈಲು ಸಂಚರಿಸಲಾಗುತ್ತದೆ ಎಂದೂ ಹೇಳಲಾಗಿತ್ತು. ಈಗ ನಾವು 2025ರಲ್ಲಿದ್ದೇವೆ. ಬುಲೆಟ್‌ ರೈಲು ಬರಲೇ ಇಲ್ಲ. ಆದರೆ ಭರವಸೆ ಮಾತ್ರ ಈಗಲೂ ಹಾಗೇ ಉಳಿದಿದೆ...

ಹೀಗೆಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದವರು ಇಂದೋರ್‌ನ ಮೇಯರ್‌ ಆಗಿರುವ ಬಿಜೆಪಿ ಮುಖಂಡ ಪುಷ್ಯಮಿತ್ರ ಭಾರ್ಗವ ಅವರ ಪುತ್ರ ಸಂಗಮಿತ್ರ ಭಾರ್ಗವ. ಇದಕ್ಕೆ ಸಾಕ್ಷಿಯಾದವರು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ ಯಾದವ್.

ADVERTISEMENT

‘ಬುಲೆಟ್‌ ರೈಲಿಗಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡಲಾಗಿದೆ. ಸಾಕಷ್ಟು ಜಮೀನುಗಳನ್ನು ಸ್ವಾದೀನಪಡಿಸಿಕೊಳ್ಳಲಾಗಿದೆ. ಆದರೆ ಬುಲೆಟ್‌ ರೈಲು ಯೋಜನೆಯು ಪವರ್‌ಪಾಯಿಂಟ್‌ ಪ್ರಸ್ತುತಿಯ ಆಚೆ ಬರುತ್ತಲೇ ಇಲ್ಲ’ ಎಂದು ಟೀಕಿಸಿದ್ದಾರೆ.

‘ಮತ್ತೊಂದೆಡೆ ರೈಲ್ವೆ ಇಲಾಖೆಯೇ ಅನ್ವೇಷಿಸಿದ ‘ಕವಚ್‌‘ ಎಂಬ ಅಪಘಾತ ನಿರೋಧಕ ವ್ಯವಸ್ಥೆಗೆ ಹತ್ತು ವರ್ಷ ಕಳೆದಿದೆ. ಆದರೆ ರೈಲು ಅಪಘಾತಗಳಲ್ಲಿ 20 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬೋಗಿಗಳು ಪ್ರತ್ಯೇಕಗೊಳ್ಳುವುದು, ಹಳಿ ತಪ್ಪುವುದು, ಕೋಚುಗಳು ಇಬ್ಭಾಗವಾಗುವುದು ಇವೆಲ್ಲವೂ ಕೇವಲ ಯಾಂತ್ರಿಕವಷ್ಟೇ ಅಲ್ಲ, ಒಬ್ಬ ತಾಯಿಯ ಮಡಿಲು ಬರಿದಾದಂತೆ, ಒಂದು ಮಗುವಿನ ಭವಿಷ್ಯ ಕತ್ತಲೆಗೆ ನೂಕಿದಂತೆ ಮತ್ತು ವಯಸ್ಸಾದ ತಂದೆ ಕಣ್ಣು ಕಳೆದುಕೊಂಡಂತೆ’ ಎಂದು ಸಂಗಮಿತ್ರ ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ.

‘ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಸಂಗಮಿತ್ರ ಬುಲೆಟ್ ರೈಲಿನ ಮೂಲಕ ತಮ್ಮ ಭಾಷಣ ಆರಂಭಿಸಿದರು. ಪ್ರತಿ ವರ್ಷ ಟಿಕೆಟ್‌ ಖರೀದಿಸಿದರೂ ವೆಯ್ಟಿಂಗ್‌ ಲೀಸ್ಟ್‌ನಿಂದಾಗಿ ಸುಮಾರು 50 ಲಕ್ಷ ಜನರಿಗೆ ರೈಲಿನಲ್ಲಿ ಪ್ರಯಾಣಿಸಲು ಸಾಧ್ಯವಾಗದ ಸ್ಥಿತಿ ಇದೆ. ದೇಶದ ರೈಲು ವ್ಯವಸ್ಥೆ ಈ ಸ್ಥಿತಿಯಲ್ಲಿರುವಾಗ ಬುಲೆಟ್‌ ರೈಲಿನ ಮಾತೇಕೆ?’ ಎಂದು ವಾಗ್ದಾಳಿ ನಡೆಸಿದರು.

ಅಸಲಿಗೆ ಸಂಗಮಿತ್ರ ಅವರು ದಾದಾ ನಿರ್ಭವ ಸಿಂಗ್ ಪಟೇಲ್ ಸ್ಮೃತಿ ಚರ್ಚಾ ಸ್ಪರ್ಧೆಯಲ್ಲಿ ವಿರೋಧ ಪಕ್ಷದ ನಾಯಕನ ಪಾತ್ರ ವಹಿಸಿದ್ದರು. ಇದನ್ನು ವೀಕ್ಷಿಸಲು ಮುಖ್ಯಮಂತ್ರಿ ಮೋಹನ ಯಾದವ್ ಅವರೂ ಪಾಲ್ಗೊಂಡಿದ್ದರು. ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಗಳ ವಿರುದ್ಧ ಅವರು ಎತ್ತಿದ ಪ್ರಶ್ನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಸಂಗಮಿತ್ರ ಭಾಷಣಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಮುಖ್ಯಮಂತ್ರಿ ಮೋಹನ ಯಾದವ್, ‘ಚರ್ಚೆ ಎಂಬುದುದು ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಸ್ಪರ್ಧೆಯಾಗಿ ನಡೆದುಕೊಂಡು ಬರುತ್ತಿದೆ. ಇವುಗಳಲ್ಲಿ ಯುವಕರು ಪಾಲ್ಗೊಳ್ಳುವುದರಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನಷ್ಟು ಬಲಶಾಲಿಯಾಗಲಿದೆ. ಸಂಗಮಿತ್ರನ ಈ ಭಾಷಣಕ್ಕೆ ಎಲ್ಲರೂ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಬೇಕು’ ಎಂದರು.

‘ಇದು ಒಂದು ಸ್ಪರ್ಧೆ. ಇಲ್ಲಿ ಸಂಗಮಿತ್ರ ವಿರೋಧ ಪಕ್ಷದ ನಾಯಕನಾಗಿ ಮಾತನಾಡಿರಬಹುದು. ಆದರೆ ಅವರ ಮಾತುಗಳನ್ನು ಕೇವಲ ಭಾಷಣವಾಗಿಯಷ್ಟೇ ಸ್ವೀಕರಿಸದೆ, ಅವುಗಳಲ್ಲಿ ಸರಿಪಡಿಸಬಹುದಾದ ಕೆಲವೊಂದು ಅಂಶಗಳನ್ನು ಸರಿಪಡಿಸುವತ್ತ ಕೆಲಸ ಮಾಡುತ್ತೇನೆ’ ಎಂದರು.

ಸಂಗಮಿತ್ರ ಮಾತನಾಡಿರುವ ವಿಡಿಯೊವನ್ನು ಹಂಚಿಕೊಂಡಿರುವ ಕಾಂಗ್ರೆಸ್ ನಾಯಕರು, ‘ಕೇಂದ್ರ ಸರ್ಕಾರವನ್ನೇ ಗುರಿಯಾಗಿಸಿ ಬಿಜೆಪಿ ಮುಖಂಡನ ಪುತ್ರನ ಭಾಷಣಕ್ಕೆ ಮೆಚ್ಚುಗೆ ಸಿಗಲೇಬೇಕು’ ಎಂದಿದ್ದಾರೆ.

ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ಅವರೂ ಸಂಗಮಿತ್ರನಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಪುತ್ರನ ಭಾಷಣಕ್ಕೆ ಪುಷ್ಯಮಿತ್ರ ಭಾರ್ಗವ ಅವರೂ ಬೆನ್ನು ತಟ್ಟಿದ್ದಾರೆ.

‘ಇದೊಂದು ಚರ್ಚಾಸ್ಪರ್ಧೆ. ಆದರೆ ಕಾಂಗ್ರೆಸ್ ನಾಯಕರು ಅದರಲ್ಲೂ ರಾಜಕೀಯ ನೋಡುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.