ADVERTISEMENT

ಓದಿಗೆ ಸ್ಮಾರ್ಟ್ ಫೋನ್ ತವಕ: ಡಜನ್ ಮಾವಿನ ಹಣ್ಣಿನಿಂದ ₹1.2 ಲಕ್ಷ ಗಳಿಸಿದ ಬಾಲಕಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜೂನ್ 2021, 10:09 IST
Last Updated 30 ಜೂನ್ 2021, 10:09 IST
ವಿದ್ಯಾರ್ಥಿನಿ ತುಳಸಿ ಕುಮಾರ್‌
ವಿದ್ಯಾರ್ಥಿನಿ ತುಳಸಿ ಕುಮಾರ್‌   

ಜೆಮ್ಶೆಡ್‌ಪುರ: ತುಳಸಿ ಕುಮಾರಿ ಎಂಬ 11 ವರ್ಷದ ಬಾಲಕಿ ಒಂದೊಂದು ಮಾವಿನ ಹಣ್ಣಿಗೆ ತಲಾ 10 ಸಾವಿರ ರೂಪಾಯಿಗಳಂತೆ ಮಾರಿದ್ದಾಳೆ. ಜಾರ್ಖಂಡ್‌ನ ಜೆಮ್ಶೆಡ್‌ಪುರದ ಬಾಲಕಿ ಒಂದು ಡಜನ್‌ ಮಾವಿನ ಹಣ್ಣುಗಳಿಂದ 1.2 ಲಕ್ಷ ರೂಪಾಯಿ ಪಡೆದಿದ್ದಾಳೆ.

ಆನ್‌ಲೈನ್‌ ತರಗತಿಯಲ್ಲಿ ಭಾಗವಹಿಸಲು ಸ್ಮಾರ್ಟ್‌ಫೋನ್‌ ತೆಗೆದುಕೊಳ್ಳುವ ಕನಸು ಹೊತ್ತಿದ್ದ ಬಾಲಕಿಗೆ ಮುಂಬೈ ಮೂಲದ ಉದ್ಯಮಿ ಅಮೆಯಾ ಹೆಟೆ ಎಂಬುವವರು ಮಾವಿನ ಹಣ್ಣುಗಳನ್ನು ಖರೀದಿಸಿ ಸಹಾಯ ಮಾಡಿದ್ದಾರೆ. ಸ್ಮಾರ್ಟ್‌ಫೋನ್‌ ಕೊಳ್ಳುವುದು ಮಾತ್ರವಲ್ಲ, ಆಕೆಯ ಭವಿಷ್ಯದ ಶಿಕ್ಷಣಕ್ಕೂ ಸಹಾಯವಾಗಲೆಂದು ಒಂದು ಮಾವಿನ ಹಣ್ಣಿಗೆ 10 ಸಾವಿರ ರೂಪಾಯಿ ಕೊಟ್ಟು ಖರೀದಿಸಿದ್ದಾರೆ.

ಕೊರೊನಾ ವೈರಸ್‌ ಸಂಕಷ್ಟ ನಿವಾರಣೆಗೆ ಹೇರಿದ ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿದ್ದ ಆಕೆಯ ಪೋಷಕರಿಗೆ ಮಗಳಿಗೆ ಸ್ಮಾರ್ಟ್‌ ಕೊಡಿಸಲು ಸಾಧ್ಯವಾಗಿರಲಿಲ್ಲ.

ADVERTISEMENT

5ನೇ ತರಗತಿ ಓದುತ್ತಿರುವ ತುಳಸಿ, 'ಮಾವಿನ ಹಣ್ಣು ಮಾರಾಟದಿಂದ ಬಂದಿದ್ದೆಲ್ಲವೂ ಮನೆಗೆ ದಿನಸಿ ತರಲು ಸರಿಹೋಗುತ್ತಿತ್ತು. ಹಾಗಾಗಿ ಸ್ಮಾರ್ಟ್‌ಫೋನ್‌ ಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆಗ ಸರ್‌ ಒಬ್ಬರು 12 ಮಾವಿನ ಹಣ್ಣುಗಳನ್ನು ಒಂದಕ್ಕೆ 10 ಸಾವಿರ ರೂಪಾಯಿಗಳಂತೆ ಖರೀದಿಸಿದರು. ಜೊತೆಗೆ ಸ್ಮಾರ್ಟ್‌ಫೋನ್‌ಅನ್ನು ಕೊಡಿಸಿದರು' ಎಂದು ಮಾಧ್ಯಮಕ್ಕೆ ತಿಳಿಸಿದ್ದಾಳೆ.

ಸ್ಮಾರ್ಟ್‌ಫೋನ್‌ ಕೊಳ್ಳುವ ಕನಸು ಹೊಂದಿದ್ದ ಮಗಳು ರಸ್ತೆಬದಿಯಲ್ಲಿ ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಳು. ಆನ್‌ಲೈನ್‌ ತರಗತಿಗಾಗಿ ಸ್ಮಾರ್ಟ್‌ ಫೋನ್‌ ಕೊಳ್ಳಬೇಕು ಎಂಬ ಆಕೆಯ ಕನಸಿನ ಬಗ್ಗೆ ತಿಳಿದ ಮುಂಬೈನ ಉದ್ಯಮಿಯೊಬ್ಬರು ಹಣ ನೀಡಿದ್ದಾರೆ ಎಂದು ತುಳಸಿಯ ತಾಯಿ ದೇವಿ ವಿವರಿಸಿದ್ದಾರೆ.

ಉದ್ಯಮಿ ಹೆಟೆ ಅವರು ವಿದ್ಯಾರ್ಥಿನಿ ತುಳಸಿ ಬಗ್ಗೆ ಸಾಮಾಜಿಕ ತಾಣದಲ್ಲಿ ಪತ್ರಕರ್ತರೊಬ್ಬರು ಮಾಡಿದ್ದ ಪೋಸ್ಟ್‌ನಿಂದ ತಿಳಿದುಕೊಂಡಿದ್ದರು. ನಂತರ ಆಕೆಗೆ ಸಹಾಯ ಮಾಡಲು ನಿರ್ಧರಿಸಿದ್ದರು ಎಂದು 'ಎನ್‌ಡಿಟಿವಿ' ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.