ADVERTISEMENT

ಸ್ವಾಯತ್ತ, ಸ್ಥಳೀಯ ಸಂಸ್ಥೆಗಳ ಲೆಕ್ಕಪರಿಶೋಧನೆಗೆ ಸಿ.ಎ.ಗಳ ನೇಮಕ: ವ್ಯಾಪಕ ವಿರೋಧ

ಸಿ.ಎ.ಗಳ ನೇಮಕ: ಮಹಾಲೇಖಪಾಲರ ನಿರ್ಧಾರಕ್ಕೆ ವಿರೋಧ | ಲೆಕ್ಕಪರಿಶೋಧನೆ ಹೊರಗುತ್ತಿಗೆ: ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 13:03 IST
Last Updated 5 ಜೂನ್ 2025, 13:03 IST
<div class="paragraphs"><p>ಲೆಕ್ಕಪರಿಶೋಧನೆ</p></div>

ಲೆಕ್ಕಪರಿಶೋಧನೆ

   

(ಸಾಂದರ್ಭಿಕ ಚಿತ್ರ)

ನವದೆಹಲಿ: ದೇಶದ ಸ್ವಾಯತ್ತ ಮತ್ತು ಸ್ಥಳೀಯ ಸಂಸ್ಥೆಗಳ ಲೆಕ್ಕಪರಿಶೋಧನೆಗಾಗಿ ಇದೇ ಮೊದಲ ಬಾರಿಗೆ ಚಾರ್ಟರ್ಡ್‌ ಅಕೌಂಟಂಟ್‌ಗಳನ್ನು(ಸಿ.ಎ) ನೇಮಕ ಮಾಡಿರುವ ಮಹಾಲೇಖಪಾಲರ (ಸಿಎಜಿ) ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ADVERTISEMENT

ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಿಪಿಎಂನ ಹಿರಿಯ ಸಂಸದರೊಬ್ಬರು ಸಿಎಜಿಯ ಈ ನಡೆಗೆ ವಿರೋಧ ವ್ಯಕ್ತಪಡಿಸಿದ್ಧಾರೆ. ‘ಸಾಂವಿಧಾನಿಕ ಅಧಿಕಾರವೊಂದನ್ನು ಹೊರಗುತ್ತಿಗೆ ನೀಡುವುದಕ್ಕೆ ಪೂರ್ವಭಾವಿಯಾಗಿ ಇಂತಹ ಕ್ರಮಕ್ಕೆ ಮುಂದಾಗಿರುವುದು ಅಪಾಯಕಾರಿ. ಇಂತಹ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ಈ ವರ್ಷದ ಜುಲೈನಿಂದ 2027ರ ಮಾರ್ಚ್‌ ವರೆಗೆ ಸ್ವಾಯತ್ತ ಹಾಗೂ ಸ್ಥಳೀಯ ಸಂಸ್ಥೆಗಳ ಲೆಕ್ಕಪರಿಶೋಧನೆ ಮಾಡುವುದಕ್ಕಾಗಿ ಸಿ.ಎ ಸಂಸ್ಥೆಗಳಿಂದ ಮೇ 27ರಂದು ‘ಆಸಕ್ತಿ ವ್ಯಕ್ತಪಡಿಸುವಿಕೆ’ (ಇಒಡಬ್ಲ್ಯು) ಆಹ್ವಾನಿಸಿದ್ದ ಸಿಎಜಿ, ಜೂನ್‌ 5ರ ಒಳಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿತ್ತು.

ಅದರಂತೆ, ಸಾರ್ವಜನಿಕ ವಲಯದ ಉದ್ದಿಮೆಗಳ ಪ್ರಾಥಮಿಕ ಲೆಕ್ಕಪರಿಶೋಧನೆ ನಡೆಸುವುದಕ್ಕಾಗಿ ಕೆಲ ಸಿ.ಎ ಸಂಸ್ಥೆಗಳನ್ನು ನೇಮಕ ಮಾಡಲಾಗಿದೆ.

ಸ್ವಾಯತ್ತ ಮತ್ತು ಸ್ಥಳೀಯ ಸಂಸ್ಥೆಗಳ ಲೆಕ್ಕಪರಿಶೋಧನೆಯಲ್ಲಿ ವಿಳಂಬವಾಗುತ್ತಿರುವ ಕುರಿತು ಇತ್ತೀಚೆಗೆ ಸಂಸದೀಯ ಸಮಿತಿಯೊಂದು ಅಸಮಾಧಾನ ವ್ಯಕ್ತಪಡಿಸಿತ್ತು. ಇನ್ನೊಂದೆಡೆ, ಸಿಎಜಿಯಲ್ಲಿ ಸಿಬ್ಬಂದಿಯ ತೀವ್ರ ಕೊರತೆಯೂ ಇದೆ. ಈ ಎಲ್ಲ ಕಾರಣಗಳಿಂದ ಲೆಕ್ಕಪರಿಶೋಧನೆ ಕಾರ್ಯವನ್ನು ಹೊರಗುತ್ತಿಗೆ ಮೂಲಕ ನಡೆಸಲು ತೀರ್ಮಾನಿಸಿರಬಹುದು ಎಂದು ಆಲ್‌ ಇಂಡಿಯಾ ಆಡಿಟ್ ಆ್ಯಂಡ್‌ ಅಕೌಂಟ್ಸ್‌ ಆಫೀಸರ್ಸ್‌ ಅಸೋಸಿಯೇಷನ್(ಎಐಎಎಒಎ) ಹೇಳಿದೆ. 

ಪ್ರಸ್ತುತ, ಸ್ಥಳೀಯ ಸಂಸ್ಥೆಗಳ ಲೆಕ್ಕಪರಿಶೋಧನೆಯನ್ನು ಇಂಡಿಯನ್ ಆಡಿಟ್ ಆ್ಯಂಡ್‌ ಅಕೌಂಟ್ಸ್‌ ಡಿಪಾರ್ಟ್‌ಮೆಂಟ್‌(ಐಎಎಡಿ) ಅಧಿಕಾರಿಗಳು ನಡೆಸುತ್ತಾರೆ.

ಸಂವಿಧಾನ ತತ್ವಗಳಿಗೆ ವಿರುದ್ಧ: ಅಸಮಾಧಾನ | ಸಾಂವಿಧಾನಿಕ ಅಧಿಕಾರದ ಹೊರಗುತ್ತಿಗೆ: ಟೀಕೆ |ರಾಷ್ಟ್ರಪತಿಗೆ ಸಿಪಿಎಂ ಸಂಸದ ಪತ್ರ

ರಾಷ್ಟ್ರಪತಿಗೆ ಪತ್ರ

ಸಿಪಿಎಂನ ಮದುರೈ ಸಂಸದ ಎಸ್‌. ವೆಂಕಟೇಶನ್‌ ಅವರು ಈ ಕುರಿತು ಜೂನ್‌ 3ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ಮಹಾಲೇಖಪಾಲರ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಈ ನಡೆಯು ಮಹಾಲೇಖಪಾಲ ಸಂಸ್ಥೆಯ ಸ್ವಾತಂತ್ರ್ಯ ಕಸಿದುಕೊಳ್ಳಲಿದೆ ಹಾಗೂ ಸಂವಿಧಾನದ ತತ್ವಗಳಿಗೆ ಧಕ್ಕೆ ಉಂಟುಮಾಡಲಿದೆ’ ಎಂದಿದ್ದಾರೆ. ಎಐಎಎಒಎ ಮಹಾ ಪ್ರಧಾನ ಕಾರ್ಯದರ್ಶಿ ಒ.ಎಸ್‌.ಸುಧಾಕರನ್ ಕೂಡ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಮಹಾಲೇಖಪಾಲ ಕೆ.ಸಂಜಯಮೂರ್ತಿ ಅವರಿಗೆ ಪತ್ರ ಬರೆದಿದ್ದಾರೆ. ‘ಮಹಾಲೇಖಪಾಲ ಸಂಸ್ಥೆಯು ನಿರ್ವಹಿಸಬೇಕಾದ ಕಾರ್ಯಕ್ಕೆ ಸಿ.ಎ.ಗಳನ್ನು ನೇಮಕ ಮಾಡಿರುವುದು ಅಸಮರ್ಪಕ ನಡೆ. ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾದುದು’ ಎಂದು ಸುಧಾಕರನ್‌ ಪತ್ರದಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.