ADVERTISEMENT

ಧಾರ್ಮಿಕ ಭಾವನೆಗಳಿಗೆ ಧಕ್ಕೆ: ರೆಹಾನಾ ಫಾತಿಮಾ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 5:43 IST
Last Updated 22 ಅಕ್ಟೋಬರ್ 2018, 5:43 IST
ರೆಹಾನಾ  ಫಾತಿಮಾ
ರೆಹಾನಾ ಫಾತಿಮಾ   

ತಿರುವನಂತಪುರಂ: ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿದ್ದ ಎರ್ನಾಕುಳಂ ಮೂಲದ ಸಾಮಾಜಿಕ ಕಾರ್ಯಕರ್ತೆ ಮತ್ತು ರೆಹಾನಾ ಫಾತಿಮಾ ವಿರುದ್ಧ ಪತ್ತನಂತಿಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದ ವಿಷಯದಲ್ಲಿ ಐಪಿಸಿ ಸೆಕ್ಷನ್ 295ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪತ್ತನಂತಿಟ್ಟ ಸಿಐ ಸುನಿಲ್ ಕುಮಾರ್ ಹೇಳಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಶಬರಿಮಲೆ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ಪಿ.ಪದ್ಮಕುಮಾರ್ ಅವರು ರೆಹಾನಾ ವಿರುದ್ಧ ಪತ್ತನಂತಿಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು ಎಂದು ಡಿಸಿಪಿ ಕಚೇರಿಯ ಅಧಿಕಾರಿಗಳು ಹೇಳಿದ್ದಾರೆ.
ಶಬರಿಮಲೆಗೆ ಪ್ರವೇಶಿಸಲು ಯತ್ನಿಸಿದ 6 ಮಂದಿ ಮಹಿಳೆಯರಲ್ಲಿ ರೆಹಾನಾ ಫಾತಿಮಾ ಕೂಡಾ ಒಬ್ಬರು.ನಡಪಂದಲ್ ವರೆಗೆ ರೆಹಾನಾ ಹೋಗಿದ್ದು ಆಕೆಗೆ ಪೊಲೀಸ್ ರಕ್ಷಣೆ ನೀಡಲಾಗಿತ್ತು, ಅಯ್ಯಪ್ಪ ವೃತಾಧಾರಿಯಂತೆ ಬಟ್ಟೆ ಧರಿಸಿದ್ದ ರೆಹಾನಾ ಇರುಮುಡಿ ಹೊತ್ತು ಶಬರಿಮಲೆಗೆ ತೆರಳಿದ್ದರು. ಈಕೆ 21 ದಿನಗಳ ವೃತಾಚಾರಣೆ ಮಾಡಿ ಶಬರಿಮಲೆಗೆ ತೆರಳಿದ್ದರು ಎಂದು ಆಕೆಯ ಸಂಗಾತಿ ಮನೋಜ್ ಶ್ರೀಧರ್ ಹೇಳಿದ್ದಾರೆ.
ಆದರೆ ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರೆಹಾನಾ ಅಲ್ಲಿಂದ ವಾಪಸ್ ಆಗಿದ್ದರು. ರೆಹಾನಾ ಶಬರಿಮಲೆಗೆ ಪ್ರವೇಶಿಸಲು ಯತ್ನಿಸಿದ್ದಕ್ಕೆ ಕೆಲವರು ಆಕೆಯ ಮನೆಯ ಮೇಲೆ ಕಲ್ಲು ತೂರಾಟ ಮಾಡಿದ್ದರು.

ಮುಸ್ಲಿಂ ಸಮಾಜದಿಂದ ರೆಹಾನಾ ಹೊರಕ್ಕೆ
ಶಬರಿಮಲೆ ದೇಗುಲ ಪ್ರವೇಶಿಸಲು ಇತ್ತೀಚೆಗೆ ವಿಫಲ ಯತ್ನ ನಡೆಸುವ ಮೂಲಕ ಹೆಸರಾಗಿದ್ದ ಸಾಮಾಜಿಕ ಕಾರ್ಯಕರ್ತೆ ಮತ್ತು ರೂಪದರ್ಶಿ ರೆಹಾನಾ ಫಾತಿಮಾ ಅವರನ್ನು ಮುಸ್ಲಿಂ ಸಮಾಜದಿಂದ ಹೊರ ಹಾಕಲಾಗಿದೆ.
ಲಕ್ಷಾಂತರ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಕಾರಣ ಫಾತಿಮಾ ಮತ್ತು ಆಕೆಯ ಕುಟುಂಬವನ್ನು ಮುಸ್ಲಿಂ ಸಮಾಜದಿಂದ ಹೊರ ಹಾಕಲಾಗಿದೆ ಎಂದು ಕೇರಳ ಮುಸ್ಲಿಂ ಜಮಾತ್‌ ಮಂಡಳಿ ಭಾನುವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.