ADVERTISEMENT

ಅನಿಲ್ ದೇಶಮುಖ್ ವಿರುದ್ಧದ ಭ್ರಷ್ಟಾಚಾರ ಆರೋಪ: ಪ್ರಾಥಮಿಕ ತನಿಖೆ ಆರಂಭಿಸಿದ ಸಿಬಿಐ

ಪಿಟಿಐ
Published 7 ಏಪ್ರಿಲ್ 2021, 1:22 IST
Last Updated 7 ಏಪ್ರಿಲ್ 2021, 1:22 IST
ಅನಿಲ್ ದೇಶ್‌ಮುಖ್
ಅನಿಲ್ ದೇಶ್‌ಮುಖ್   

ಮುಂಬೈ: ಎನ್‌ಸಿಪಿ ನಾಯಕ ಅನಿಲ್ ದೇಶಮುಖ್ ಅವರ ವಿರುದ್ಧದ ಭ್ರಷ್ಟಾಚಾರ ಆರೋಪ ಕುರಿತು ಸಿಬಿಐ ಪ್ರಾಥಮಿಕ ತನಿಖೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ 15 ದಿನಗಳ ಒಳಗೆ ಪ್ರಾಥಮಿಕ ತನಿಖೆ ನಡೆಸುವಂತೆ ಬಾಂಬೆ ಹೈಕೋರ್ಟ್‌ ಸೋಮವಾರ ಸಿಬಿಐಗೆ ನಿರ್ದೇಶಿಸಿತ್ತು.

ಸಿಬಿಐನ ತಂಡವೊಂದು ಮಂಗಳವಾರ ಮುಂಬೈಗೆ ತಲುಪಿದ್ದು, ಎಲ್ಲ ಸಂಬಂಧಿತ ದಾಖಲೆಗಳನ್ನು ಸಂಗ್ರಹಿಸಿದೆ. ಹೈಕೋರ್ಟ್ ಆದೇಶಕ್ಕೆ ಅನುಸಾರವಾಗಿ ಪ್ರಾಥಮಿಕ ತನಿಖೆಯನ್ನು ಪ್ರಾರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಬಾಂಬೆ ಹೈಕೋರ್ಟ್ ಏಪ್ರಿಲ್ 5ರಂದು ನೀಡಿದ್ದ ಆದೇಶದ ಅನುಸಾರ ಸಿಬಿಐ ಪ್ರಾಥಮಿಕ ತನಿಖೆ ದಾಖಲಿಸಿದೆ’ ಎಂದು ಸಿಬಿಐ ವಕ್ತಾರ ಆರ್‌ಸಿ ಜೋಶಿ ಹೇಳಿದ್ದಾರೆ.

ಅನಿಲ್ ದೇಶಮುಖ್ ವಿರುದ್ಧ ಮುಂಬೈನ ಮಾಜಿ ಪೊಲೀಸ್ ಮುಖ್ಯಸ್ಥ ಪರಮ್ ವೀರ್‌ ಸಿಂಗ್ ಭ್ರಷ್ಟಾಚಾರ ಆರೋಪ ಮಾಡಿದ್ದರು. ಅದಾಗಿ ಕೆಲವು ದಿನಗಳ ಬಳಿಕ ಮಹಾರಾಷ್ಟ್ರ ಗೃಹ ಸಚಿವ ಸ್ಥಾನಕ್ಕೆ ದೇಶಮುಖ್ ರಾಜೀನಾಮೆ ನೀಡಿದ್ದರು. ಪ್ರತಿ ತಿಂಗಳೂ ₹100 ಕೋಟಿ ಲಂಚ ಸಂಗ್ರಹಿಸುವಂತೆ ಅಮಾನತುಗೊಂಡಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆಗೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಸೂಚಿಸಿದ್ದರು ಎಂದು ಪರಮ್ ವೀರ್‌ ಸಿಂಗ್ ಆರೋಪಿಸಿದ್ದರು.

ಈ ಮಧ್ಯೆ, ಸಿಬಿಐ ಪ್ರಾಥಮಿಕ ತನಿಖೆ ನಡೆಸಬೇಕೆಂದು ಬಾಂಬೆ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.