ಸಾಂದರ್ಭಿಕ ಚಿತ್ರ
ನವದೆಹಲಿ: ‘ಕೋಲ್ಡ್ರಿಫ್’ ಕೆಮ್ಮಿನ ಸಿರಪ್ ತಯಾರಕರ ವಿರುದ್ಧ ಅತ್ಯಂತ ಗಂಭೀರ ಅಪರಾಧಗಳ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ತಮಿಳುನಾಡು ಆಹಾರ ಸುರಕ್ಷತೆ ಮತ್ತು ಔಷಧ ನಿರ್ವಹಣೆ ಇಲಾಖೆಗೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಪತ್ರ ಬರೆದಿದೆ ಎಂದು ಮೂಲಗಳು ತಿಳಿಸಿವೆ.
ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಒಟ್ಟು 11 ಮಕ್ಕಳ ಸಾವಿಗೆ ಕಲುಷಿತ ಕೆಮ್ಮಿನ ಸಿರಪ್ ಕಾರಣವೇ ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ತಮಿಳುನಾಡು, ತೆಲಂಗಾಣ ಹಾಗೂ ಕೇರಳದಲ್ಲಿ ‘ಕೋಲ್ಡ್ರಿಫ್’ ಸಿರಪ್ ಮಾರಾಟವನ್ನು ನಿಷೇಧಿಸಲಾಗಿದೆ. ಮಾರುಕಟ್ಟೆಯಿಂದ ಈ ಸಿರಪ್ ಅನ್ನು ಹಿಂಪಡೆಯುವಂತೆಯೂ ಸೂಚಿಸಲಾಗಿದೆ.
ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್‌ಗಳನ್ನು ಪೂರೈಸುವ ಮತ್ತೊಂದು ಕಂಪನಿ ‘ನೆಕ್ಸ್ಟ್ರೋ ಡಿಎಸ್’ ಮಾದರಿಯ ವರದಿ ಇನ್ನಷ್ಟೇ ಬರಬೇಕಿದೆ.
ಸಿಡಿಎಸ್‌ಸಿಒ ಆರು ಹಾಗೂ ಮಧ್ಯಪ್ರದೇಶದ ಆಹಾರ ಮತ್ತು ಔಷಧ ನಿರ್ವಹಣೆ(ಎಂಪಿಎಫ್‌ಡಿಎ) ಇಲಾಖೆ ಮೂರು ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿತ್ತು. ಈ ಮಾದರಿಗಳಲ್ಲಿ ಡೈಇಥಿಲೀನ್ ಗ್ಲೈಕೋಲ್(ಡಿಇಜಿ) ಮತ್ತು ಇಥಿಲೀನ್ ಗ್ಲೈಕೋಲ್ (ಇಜಿ) ಕಂಡುಬಂದಿಲ್ಲ ಎಂದು ಆರೋಗ್ಯ ಸಚಿವಾಲಯ ಶುಕ್ರವಾರ ಹೇಳಿತ್ತು.
‘ಕೆಮ್ಮು ಮತ್ತು ಶೀತಕ್ಕೆ ಸಂಬಂಧಿಸಿದಂತೆ ಎರಡು ವರ್ಷದೊಳಗಿನ ಮಕ್ಕಳಿಗೆ ಔಷಧ ಶಿಫಾರಸು ಮಾಡಬಾರದು. ಐದು ವರ್ಷದೊಳಗಿನ ಮಕ್ಕಳಿಗೂ ಸಾಮಾನ್ಯವಾಗಿ ಅಗತ್ಯ ಇರುವುದಿಲ್ಲ. ಅತಿ ಅಗತ್ಯವಾದರೆ ಮಾತ್ರ ಸೂಕ್ತ ಪ್ರಮಾಣದಲ್ಲಿ ಕಡಿಮೆ ಅವಧಿಗೆ ಒದಗಿಸಬೇಕು’ ಎಂದು ಕೇಂದ್ರ ಸರ್ಕಾರದ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ (ಡಿಜಿಎಚ್‌ಎಸ್) ಸೂಚನೆ ನೀಡಿದೆ.
ಈ ಬಗ್ಗೆ ಎಲ್ಲ ರಾಜ್ಯಗಳ ಆರೋಗ್ಯ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದೆ. ‘ಮಕ್ಕಳಲ್ಲಿನ ಕೆಮ್ಮಿಗೆ ಔಷಧಗಳನ್ನು ವಿವೇಚನೆ ಬಳಸಿ ವೈದ್ಯರು ಶಿಫಾರಸು ಮಾಡಬೇಕು. ಬಹುತೇಕ ಕೆಮ್ಮಿನ ಸಮಸ್ಯೆಗಳು ಔಷಧಗಳ ಅಗತ್ಯವಿಲ್ಲದೆ ಕಡಿಮೆಯಾಗುತ್ತವೆ. ಆದ್ದರಿಂದ ಅನಗತ್ಯವಾಗಿ ಔಷಧ ಬಳಕೆ ತಪ್ಪಿಸಿ, ವೈದ್ಯರ ಸಲಹೆಗಳನ್ನು ಮಾತ್ರ ಪಾಲಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದೆ.
ಮಧ್ಯಪ್ರದೇಶದ ಛಿಂದ್ವಾರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ, ಕಲುಷಿತ ಕೆಮ್ಮಿನ ಸಿರಪ್ ಸೇವಿಸಿದ್ದ ಚಿಕ್ಕಮಕ್ಕಳು ಮೃತಪಟ್ಟ ಘಟನೆ ಬೆನ್ನಲ್ಲೇ, ಸಿಡಿಎಸ್‌ಸಿಒ ಈ ಕ್ರಮಕ್ಕೆ ಮುಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.