ADVERTISEMENT

ಕದನ ವಿರಾಮ ಉಲ್ಲಂಘನೆ: ಪಾಕ್‌ ನಡೆ ಟೀಕಿಸಿದ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಮೇ 2025, 2:50 IST
Last Updated 11 ಮೇ 2025, 2:50 IST
<div class="paragraphs"><p>ವಿಕ್ರಂ ಮಿಸ್ರಿ</p></div>

ವಿಕ್ರಂ ಮಿಸ್ರಿ

   

ನವದೆಹಲಿ: ಕದನ ವಿರಾಮ ಉಲ್ಲಂಘಿಸಿ ದಾಳಿ ಮುಂದುವರಿಸಿದ ಪಾಕಿಸ್ತಾನದ ನಡೆಯನ್ನು ಭಾರತ ಕಟುವಾಗಿ ಟೀಕಿಸಿದೆ.

ಶನಿವಾರ ಸಂಜೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ರಾಜಸ್ಥಾನದ ಗಡಿ ನಿಯಂತ್ರಣ ರೇಖೆ ಮತ್ತು ಅಂತರರಾಷ್ಟ್ರೀಯ ಗಡಿಯಲ್ಲಿ ಶೆಲ್ ದಾಳಿ ಮಾಡುವ ಮೂಲಕ ಕದನ ವಿರಾಮವನ್ನು ಉಲ್ಲಂಘಿಸಿತ್ತು.

ADVERTISEMENT

ಪಾಕಿಸ್ತಾನವು ಕದನ ವಿರಾಮವನ್ನು ಗೌರವಿಸಬೇಕು ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಬೇಕು ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಹೇಳಿದ್ದಾರೆ.

‘ಪಾಕಿಸ್ತಾನದ ಡ್ರೋನ್‌ಗಳು ಭಾರತದ ವಾಯು ಪ್ರದೇಶವನ್ನು ದಾಟಿ ಬಂದಿದ್ದು, ಹಲವಾರು ಪ್ರದೇಶಗಳಲ್ಲಿ ಸ್ಫೋಟದ ಸದ್ದು ಕೇಳಿಬಂದಿದೆ. ಪಾಕಿಸ್ತಾನದ ಈ ನಡೆಯನ್ನು ಅಂತರರಾಷ್ಟ್ರೀಯ ಸಮುದಾಯ ಗಮನಿಸಬೇಕು’ ಎಂದು ಮಿಸ್ರಿ ಆಗ್ರಹಿಸಿದ್ದಾರೆ.

ಭಾರತದ ಭೂಪ್ರದೇಶವನ್ನು ಮತ್ತು ನಾಗರಿಕರನ್ನು ರಕ್ಷಿಸುವ ಬದ್ಧತೆಯನ್ನು ಅವರು ಪುನರುಚ್ಛರಿಸಿದ್ದಾರೆ.

ಭವಿಷ್ಯದಲ್ಲಿ ಕದನ ವಿರಾಮ ಉಲ್ಲಂಘಿಸಿದ್ದಲ್ಲಿ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲು ಸರ್ಕಾರ ಮತ್ತು ಸಶಸ್ತ್ರ ಪಡೆಗಳು ಸಂಪೂರ್ಣ ಸಿದ್ಧವಾಗಿವೆ ಎಂದು ತಿಳಿಸಿದ್ದಾರೆ.

ಎರಡೂ ದೇಶಗಳ ಮಿಲಿಟರಿ ನಾಯಕರ ನಡುವಿನ ಮಾತುಕತೆಯ ನಂತರ ಶನಿವಾರ ಸಂಜೆ ಪಾಕಿಸ್ತಾನ ಮತ್ತು ಭಾರತ ನಡುವೆ ಕದನ ವಿರಾಮ ಜಾರಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.