ADVERTISEMENT

ಕೇಂದ್ರ ಸರ್ಕಾರದಿಂದ ‘ಮೇರಿ ಲೈಫ್‌’ ಮೊಬೈಲ್ ಆ್ಯಪ್‌ ಅನಾವರಣ

ಪಿಟಿಐ
Published 15 ಮೇ 2023, 12:20 IST
Last Updated 15 ಮೇ 2023, 12:20 IST
(ಚಿತ್ರ : Twitter/@moefcc)
(ಚಿತ್ರ : Twitter/@moefcc)   

ನವದೆಹಲಿ: ಯುವಕರನ್ನು ಸಶಕ್ತಗೊಳಿಸುವ ಹಾಗೂ ಹವಾಮಾನ ಬದಲಾವಣೆಗೆ ಕಡಿವಾಣ ಹಾಕುವ ಕಾರ್ಯದಲ್ಲಿ ಅವರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸೋಮವಾರ ‘ಮೇರಿ ಲೈಫ್‌’ (ನನ್ನ ಬದುಕು) ಮೊಬೈಲ್‌ ಆ್ಯಪ್‌ ಅನಾವರಣಗೊಳಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರ ‘ಮಿಷನ್‌ ಲೈಫ್‌’ ಆ್ಯಪ್‌ನಿಂದ ಪ್ರೇರಣೆಗೊಂಡು ಇದನ್ನು ಅಭಿವೃದ್ಧಿಪಡಿಸಲಾಗಿದೆ. ಮೇರಿ ಲೈಫ್‌ನಲ್ಲಿನ ‘ಲೈಫ್‌’ ಎಂಬ ಪದವು ಪರಿಸರಕ್ಕಾಗಿ ಜೀವನಶೈಲಿ ಎಂಬ ಅರ್ಥವನ್ನು ಕೊಡುತ್ತದೆ. 

‘ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಷ್ಟ್ರವ್ಯಾಪಿ ಆಂದೋಲನ ಕೈಗೊಳ್ಳುವುದಕ್ಕೆ ಈ ಆ್ಯಪ್‌ ನೆರವಾಗಲಿದೆ. ನಾಗರಿಕರ ಶಕ್ತಿ ಪ್ರದರ್ಶನಕ್ಕೂ ವೇದಿಕೆ ಕಲ್ಪಿಸಲಿದೆ’ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್‌ ಯಾದವ್‌ ಹೇಳಿದ್ದಾರೆ. 

ADVERTISEMENT

‘ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು, ರಾಜ್ಯ ಸರ್ಕಾರಗಳು, ಇನ್‌ಸ್ಟಿಟ್ಯೂಟ್‌ಗಳು ಹಾಗೂ ಖಾಸಗಿ ಸಂಸ್ಥೆಗಳ ಪಾಲ್ಗೊಳ್ಳುವಿಕೆಯನ್ನು ಈ ಆ್ಯಪ್‌ ಪ್ರೋತ್ಸಾಹಿಸಲಿದೆ. ಪರಿಸರ ರಕ್ಷಣೆಯ ನಿಟ್ಟಿನಲ್ಲಿ ಕೈಗೊಳ್ಳಬೇಕಿರುವ ಸುಸ್ಥಿರ ಚಟುವಟಿಕೆಗಳ ಕುರಿತು ಇದರ ಮೂಲಕ ಜಾಗೃತಿ ಮೂಡಿಸಬಹುದಾಗಿದೆ. ಆ್ಯಪ್‌ ಕುರಿತು ಜನರಲ್ಲಿ ಅರಿವು ಮೂಡಿಸಲು ಒಂದು ತಿಂಗಳ ಕಾಲ ಅಭಿಯಾನ ಕೈಗೊಳ್ಳಲಾಗುತ್ತದೆ’ ಎಂದು ಮಾಹಿತಿ ನೀಡಿದ್ದಾರೆ.

‘ಪರಿಸರ ಸಚಿವಾಲಯವು ರಚಿಸಿರುವಂತಹ 100ಕ್ಕೂ ಅಧಿಕ ಸೃಜನಶೀಲ ವಿಡಿಯೊಗಳು ಹಾಗೂ ಇತರೆ ಜ್ಞಾನಾಧಾರಿತ ಸಾಮಾಗ್ರಿಗಳು ಈ ಆ್ಯಪ್‌ನಲ್ಲಿ ಲಭ್ಯವಿರುತ್ತವೆ. ಅವು ಎಲ್ಲರಿಗೂ ಮುಕ್ತವಾಗಿ ದೊರೆಯಲಿವೆ’ ಎಂದಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.