ADVERTISEMENT

NEP ತ್ರಿಭಾಷಾ ಸೂತ್ರ | ದಕ್ಷಿಣದ ಆತಂಕ ಆಲಿಸದೆ ಜಡವಾದ ಕೇಂದ್ರ: ಕಾರಟ್ ಆರೋಪ

ಪಿಟಿಐ
Published 15 ಮಾರ್ಚ್ 2025, 13:56 IST
Last Updated 15 ಮಾರ್ಚ್ 2025, 13:56 IST
ಪ್ರಕಾಶ್ ಕಾರಟ್
ಪ್ರಕಾಶ್ ಕಾರಟ್    

ನವದೆಹಲಿ: ದೇಶದ ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನ ನೀಡಬೇಕು ಎಂಬ ಕೂಗು ಎದ್ದಿರುವ ಹೊತ್ತಿಗೆ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿನ ತ್ರಿಭಾಷಾ ಸೂತ್ರದ ಕುರಿತು ದಕ್ಷಿಣದ ರಾಜ್ಯಗಳ ಆತಂಕಕ್ಕೆ ಕೇಂದ್ರ ಸರ್ಕಾರವು ಜಡವಾಗಿ ವರ್ತಿಸುತ್ತಿದೆ ಎಂದು ಸಿಪಿಐ(ಎಂ)ನ ಮುಖಂಡ ಪ್ರಕಾಶ್ ಕಾರಟ್ ಕಳವಳ ವ್ಯಕ್ತಪಡಿಸಿದ್ದಾರೆ.

ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಎಲ್ಲಾ ಭಾಷೆಗಳನ್ನೂ ಸಮಾನವಾಗಿ ಗೌರವಿಸುವ ಬದಲು ಒಂದು ಭಾಷೆಯನ್ನು ಎಲ್ಲರ ಮೇಲೂ ಹೇರಲು ಹೊರಟಾಗ ಸಹಜವಾಗಿ ಆ ಭಾಷೆಯು ‘ಲಿಂಗ್ವಾ ಫ್ರಾಂಕಾ’ ಎಂಬ ಹೇರಿಕೆ ಆರಂಭವಾಗುತ್ತದೆ. ಕೇಂದ್ರದ ಹಿಂದಿ ಹೇರಿಕೆಗೆ ಎನ್‌ಇಪಿಯ ಈ ಸೂತ್ರವು ಹೊತ್ತಿರುವ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಂತಾಗಿದೆ’ ಎಂದಿದ್ದಾರೆ.

ತ್ರಿಭಾಷಾ ಸೂತ್ರಕ್ಕೆ ತಮಿಳುನಾಡಿನ ಡಿಎಂಕೆ ನೇತೃತ್ವದ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಇದರಿಂದ ಕೇಂದ್ರ ಮತ್ತು ರಾಜ್ಯಗಳ ನಡುವಿನ ಗುದ್ದಾಟ ಮತ್ತಷ್ಟು ತಾರಕಕ್ಕೇರಿದೆ. 

ADVERTISEMENT

‘ತ್ರಿಭಾಷಾ ಸೂತ್ರವು ತಮಿಳುನಾಡಿನ ಜನರ ಆತಂಕ ಹೆಚ್ಚಿಸಿದೆ. ಆದರೆ ಈ ಜನರ ವಿರೋಧವನ್ನು ಲೆಕ್ಕಿಸದಷ್ಟು ಜಡವಾಗಿ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ. ಯಾರಿಗೆ ಏನೇ ತೊಂದರೆಯಾಗಲಿ ಹಿಂದಿಯನ್ನು ಹೇರಲೇಬೇಕು ಎಂಬ ಕೇಂದ್ರದ ಹಠಮಾರಿ ಧೋರಣೆಯು ದಕ್ಷಿಣದ ರಾಜ್ಯಗಳ ವಿರೋಧಕ್ಕೆ ಕಾರಣವಾಗಿದೆ’ ಎಂದಿದ್ದಾರೆ.

‘ಶಿಕ್ಷಣ ಎನ್ನುವುದು ಎಲ್ಲರನ್ನೂ ಒಳಗೊಳ್ಳುವ ವಿಷಯವಾಗಿದ್ದು, ಇದರಲ್ಲಿ ನಿರ್ಣಯದ ಹಕ್ಕು ರಾಜ್ಯಗಳಿಗೂ ಇದೆ. ಹೀಗಿದ್ದರೂ ಎನ್‌ಇಪಿ ಏಕಪಕ್ಷೀಯವಾಗಿ ತೆಗೆದುಕೊಂಡಿರುವ ನಿರ್ಧಾರದ ಕುರಿತು ದೊಡ್ಡ ಪ್ರಶ್ನೆ ಎದ್ದಿದೆ. ಇದರಲ್ಲಿ ಕೇರಳಕ್ಕೆ ಕೆಲವೊಂದು ಮೀಸಲಾತಿ ನೀಡಲಾಗಿದೆ. ಶಿಕ್ಷಣವನ್ನು ಎಲ್ಲಾ ರಾಜ್ಯಗಳಲ್ಲೂ ಸಮಾನವಾಗಿ ನೀಡಲಾಗುತ್ತಿದೆ. ಆದರೆ ಅದರಲ್ಲಿ ಕೇಂದ್ರ ಹಸ್ತಕ್ಷೇಪ ಮಾಡುತ್ತಿದೆ’ ಎಂದು ಕಾರಟ್ ಆರೋಪಿಸಿದ್ದಾರೆ.

‘ಇಲ್ಲಿ ಕೇಂದ್ರದ ಹುನ್ನಾರ ಹಿಂದಿ ಹೇರಿಕೆ ಮಾತ್ರವಲ್ಲ. ಬದಲಿಗೆ ಕೇಂದ್ರ ಸರ್ಕಾರದ ಹಲವು ಗುಪ್ತ ಕಾರ್ಯಸೂಚಿಗಳನ್ನು ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ರಾಜ್ಯಗಳ ಮೇಲೆ ಹೇರುವ ಕೆಲಸ ನಡೆಯುತ್ತಿದೆ. ಈ ಕಾರಣದಿಂದಾಗಿ ತಮಿಳುನಾಡು ಭೀತಿಗೊಂಡಿದೆ’ 
– ಪ್ರಕಾಶ್ ಕಾರಟ್, ಸಿಪಿಐ(ಎಂ) ಮುಖಂಡ

‘ನಮ್ಮದು ಬಹುಭಾಷಾ ಸಮಾಜ. ಸಂವಿಧಾನದಲ್ಲೂ ದೇಶದ 22 ಭಾಷೆಗಳು ಸಮಾನ ಎಂದೇ ಹೇಳಲಾಗಿದೆ. ಇವೆಲ್ಲವೂ ರಾಷ್ಟ್ರದ ಅಧಿಕೃತ ಭಾಷೆಗಳು ಎಂದು ಉಲ್ಲೇಖಿಸಲಾಗಿದೆ. ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನಮಾನವಿದೆ ಎಂದೇ ನಾವೆಲ್ಲರೂ ಭಾವಿಸಿದ್ದೇವೆ. ಬಂಗಾಳಿ, ತೆಲುಗು, ತಮಿಳು ಅಥವಾ ಪಂಜಾಬಿ ಸೇರಿದಂತೆ ಹಲವು ರಾಜ್ಯಗಳ ಭಾಷೆಗಳನ್ನು ಹೆಚ್ಚು ಜನರು ಬಳಸುತ್ತಾರೆ. ಕೆಲ ರಾಜ್ಯಗಳು ಯುರೋಪ್‌ನ ಹಲವು ರಾಷ್ಟ್ರಗಳಿಗಿಂತಲೂ ದೊಡ್ಡದಾಗಿವೆ. ಈ ವಿವಿಧತೆಯನ್ನು ಗೌರವಿಸಿ, ಎಲ್ಲಾ ಭಾಷೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ’ ಎಂದು ಕಾರಟ್ ಆಗ್ರಹಿಸಿದ್ದಾರೆ.

‘ಹೀಗಿರುವಾಗ ಒಂದು ಭಾಷೆಯನ್ನು ಅಧಿಕೃತ ಭಾಷೆ ಎಂದು ಅದನ್ನೇ ಓದಬೇಕು, ಬರೆಯಬೇಕು ಹಾಗೂ ಬಳಸಬೇಕು ಎಂದು ಹೇಳಲು ಬಾರದು. ಭಾಷೆ ಎಂಬುದು ಸಮಾಜದಲ್ಲಿ ಸಂವಹನಗಳ ಮೂಲಕ ಬೆಳೆಯುವಂತದ್ದು. ಕೆಲವೆಡೆ ಕೆಲ ಜನರ ಮಾತೃಭಾಷೆ ಬೇರೆಯೇ ಆಗಿದ್ದರೂ, ಅವರು ಮತ್ತೊಂದು ಭಾಷೆಯನ್ನು ಕಲಿತ ಉದಾಹರಣೆಗಳು ಸಾಕಷ್ಟಿವೆ. ಇಂಗ್ಲಿಷ್ ಕೂಡಾ ಇದೇ ಮಾದರಿಯಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. ಒಂದೊಮ್ಮೆ ಹಿಂದಿ ಇಂಥ ಜನಪ್ರಿಯತೆ ಪಡೆದರೆ, ಸಹಜವಾಗಿ ಜನರೇ ಅದನ್ನು ಕಲಿಯುತ್ತಾರೆ. ಆದರೆ ಕೇಂದ್ರದ ಇಂಥ ಹೇರಿಕೆ ಸಮಂಜಸವಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.