ADVERTISEMENT

ಲಡಾಖ್ ಸಮೀಪದ ಪವರ್‌ ಗ್ರಿಡ್‌ಗಳ ಮೇಲೆ ಚೀನಾದ ಸೈಬರ್‌ ದಾಳಿ: ವರದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಏಪ್ರಿಲ್ 2022, 6:51 IST
Last Updated 7 ಏಪ್ರಿಲ್ 2022, 6:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಚೀನಾ ಸರ್ಕಾರ ಬೆಂಬಲಿತ ಹ್ಯಾಕರ್‌ಗಳು ಭಾರತದ ಲಡಾಖ್‌ ಭಾಗದಲ್ಲಿರುವ ವಿದ್ಯುತ್‌ ಸರಬರಾಜು ಕೇಂದ್ರಗಳನ್ನು ಗುರಿಯಾಗಿಸಿ ಸೈಬರ್‌ ದಾಳಿಗಳನ್ನು ನಡೆಸಿರುವುದಾಗಿ ವರದಿಯಾಗಿದೆ. ಗಡಿ ಭಾಗಗಳಲ್ಲಿ ಭಾರತ ಮತ್ತು ಚೀನಾ ಸೇನಾ ಪಡೆಗಳ ನಿಯೋಜನೆಯು ಮುಂದುವರಿದಿದ್ದು, ಈ ನಡುವೆ ಕಳೆದ ಎಂಟು ತಿಂಗಳಲ್ಲಿ ಸೈಬರ್‌ ದಾಳಿಗಳು ನಡೆದಿರುವುದಾಗಿ ಸೈಬರ್‌ ಭದ್ರತೆಗೆ ಸಂಬಂಧಿಸಿದ ಖಾಸಗಿ ಸಂಸ್ಥೆ 'ರೆಕಾರ್ಡೆಡ್‌ ಫ್ಯೂಚರ್' ಹೇಳಿದೆ.

ಭಾರತದ ಕನಿಷ್ಠ 7 ರಾಜ್ಯ ವಿದ್ಯುತ್‌ ರವಾನೆ ಕೇಂದ್ರಗಳನ್ನು (ಎಸ್‌ಎಲ್‌ಡಿಸಿ) ಹ್ಯಾಕರ್‌ಗಳು ಗುರಿಯಾಗಿಸಿಕೊಂಡಿರುವುದನ್ನು ಗಮನಿಸಲಾಗಿದೆ. ಪವರ್‌ ಗ್ರಿಡ್‌ಗಳು ಮತ್ತು ವಿದ್ಯುತ್‌ ಸರಬರಾಜಿನ ಮೇಲೆ ನಿಯಂತ್ರಣ ಸಾಧಿಸುವ ಪ್ರಯತ್ನ ನಡೆಸಲಾಗಿದೆ. ಲಡಾಖ್‌ಗೆ ಸಮೀಪದ ಉತ್ತರ ಭಾರತದ ವಿದ್ಯುತ್‌ ರವಾನೆ ಕೇಂದ್ರಗಳನ್ನು ಗುರಿಯಾಗಿಸಲಾಗಿದೆ. ಕಳೆದ ವರ್ಷ ಆಗಸ್ಟ್‌ನಿಂದ ಈ ವರ್ಷ ಮಾರ್ಚ್‌ ವರೆಗೂ ಸೈಬರ್‌ ದಾಳಿ ನಡೆದಿರುವುದು ತಿಳಿದು ಬಂದಿರುವುದಾಗಿ ಎನ್‌ಡಿಟಿವಿ ವೆಬ್‌ಸೈಟ್‌ ವರದಿ ಮಾಡಿದೆ

ಭಾರತದ ಅತ್ಯಗತ್ಯ ಮೂಲಸೌಕರ್ಯ ವ್ಯವಸ್ಥೆಯ ಕುರಿತು ಚೀನಾದ ಹ್ಯಾಕರ್‌ಗಳು ಮಾಹಿತಿ ಕಲೆ ಹಾಕುತ್ತಿರುವುದಾಗಿ ರೆಕಾರ್ಡೆಡ್‌ ಫ್ಯೂಚರ್‌ ವರದಿಯಲ್ಲಿ ಹೇಳಿದೆ.

ADVERTISEMENT

ದೇಶದಲ್ಲಿ ವಿದ್ಯುತ್‌ ಪೂರೈಕೆ ಕೇಂದ್ರಗಳ ಮೇಲೆ ನಿರಂತರವಾಗಿ 18 ತಿಂಗಳಿನಿಂದ ಹ್ಯಾಕರ್‌ಗಳು ದೃಷ್ಟಿ ನೆಟ್ಟಿರುವುದಾಗಿ ತಿಳಿಸಿದೆ. ದೇಶದ ವಿದ್ಯುತ್‌ ವಲಯದ 10 ಕಂಪನಿಗಳ ಮೇಲೆ ಸೈಬರ್‌ ದಾಳಿ ನಡೆದಿರುವುದಾಗಿ ರೆಕಾರ್ಡೆಡ್‌ ಫ್ಯೂಚರ್‌ ಕಳೆದ ವರ್ಷ ಫೆಬ್ರುವರಿಯಲ್ಲಿ ವರದಿ ಮಾಡಿತ್ತು.

ಭಾರತ ಮತ್ತು ಚೀನಾ ಸುಮಾರು 3,500 ಕಿ.ಮೀ. ಉದ್ದದ ಗಡಿ ಭಾಗವನ್ನು ಹಂಚಿಕೊಂಡಿವೆ. 2020ರ ಜೂನ್‌ನಲ್ಲಿ ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆದಿತ್ತು. ಆ ಮುಖಾಮುಖಿಯಲ್ಲಿ ಭಾರತದ ಹತ್ತಾರು ಯೋಧರು ಹುತಾತ್ಮರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.