ADVERTISEMENT

ಚುನಾವಣಾ ಆಯುಕ್ತರ ನೇಮಕ: ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ ಸಂಜೀವ್‌ ಖನ್ನಾ

ಪಿಟಿಐ
Published 3 ಡಿಸೆಂಬರ್ 2024, 15:30 IST
Last Updated 3 ಡಿಸೆಂಬರ್ 2024, 15:30 IST
ಸಂಜೀವ್‌ ಖನ್ನಾ
ಸಂಜೀವ್‌ ಖನ್ನಾ   

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರು ಮತ್ತು ಆಯುಕ್ತರನ್ನು ನೇಮಕ ಮಾಡುವ ಸಮಿತಿಯಿಂದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರನ್ನು ಹೊರಗಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯಿಂದ ಸಿಜೆಐ ಸಂಜೀವ್‌ ಖನ್ನಾ ಅವರು ಹಿಂದೆಸರಿದಿದ್ದಾರೆ.

ನ್ಯಾಯಮೂರ್ತಿ ಸಂಜಯ್‌ ಕುಮಾರ್‌ ಅವರೊಂದಿಗೆ ನ್ಯಾಯಪೀಠದಲ್ಲಿ ಕುಳಿತಿದ್ದ ಸಿಜೆಐ ಖನ್ನಾ ಅವರು, ‘ಈಗ ಅರ್ಜಿಗಳ ವಿಚಾರಣೆ ನಡೆಸುವುದಿಲ್ಲ’ ಎಂದು ನ್ಯಾಯಾಲಯದ ಎದುರು ಹಾಜರಿದ್ದ ವಕೀಲರಿಗೆ ತಿಳಿಸಿದರು.

‘ಈ ಅರ್ಜಿಗಳ ವಿಚಾರಣೆಯನ್ನು ನಾನು ನಡೆಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಯೋಚಿಸುತ್ತಿದ್ದೇನೆ’ ಎಂದು ಹೇಳಿದರು.

ADVERTISEMENT

ಕೇಂದ್ರದ ಪರ ವಕೀಲರು, ‘ಅದನ್ನು ನೀವೇ ನಿರ್ಧರಿಸಬೇಕು’ ಎಂದು ಪ್ರತಿಕ್ರಿಯಿಸಿದರು.

ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್‌ ಮತ್ತು ವಕೀಲ ಪ್ರಶಾಂತ್‌ ಭೂಷಣ್‌ ಅವರು, ‘ನ್ಯಾಯಮೂರ್ತಿ ಖನ್ನಾ ನೇತೃತ್ವದ ಈ ಹಿಂದಿನ ನ್ಯಾಯಪೀಠವು ಅರ್ಜಿ ವಿಚಾರವಾಗಿ ಮಧ್ಯಂತರ ಆದೇಶ ಹೊರಡಿಸಿತ್ತು’ ಎಂದು ಹೇಳಿದರು. 

ನ್ಯಾ.ಖನ್ನಾ ಅವರು, ‘ಆಗಿನ ಸಂದರ್ಭವೇ ಭಿನ್ನವಾಗಿತ್ತು. ಚಳಿಗಾಲದ ವಿರಾಮದ ನಂತರ ಬೇರೊಂದು ನ್ಯಾಯಪೀಠವು ಪ್ರಕರಣದ ವಿಚಾರಣೆ ನಡೆಸಲಿದೆ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ‘ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ನಿಗದಿತ ಸಮಯದ ಒಳಗಾಗಿ ಪ್ರತಿಕ್ರಿಯೆ ನೀಡಿ’ ಎಂದು ಕೇಂದ್ರ ಸರ್ಕಾರ ಮತ್ತು ಇತರರಿಗೆ ಸೂಚಿಸಿದರು.

ಇದಕ್ಕೂ ಮುನ್ನ ಜನವರಿ ಮತ್ತು ಮಾರ್ಚ್‌ನಲ್ಲಿ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾ.ಖನ್ನಾ ಅವರು ಇಬ್ಬರು ಚುನಾವಣಾ ಆಯುಕ್ತರ ನೇಮಕಕ್ಕೆ ತಡೆ ನೀಡಲು ನಿರಾಕರಿಸಿದ್ದರು.

ಕೇಂದ್ರ ಸರ್ಕಾರವು 2023ರ ಡಿಸೆಂಬರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ (ನೇಮಕ, ಷರತ್ತುಗಳು) ಕಾಯ್ದೆಗೆ ತಿದ್ದುಪಡಿ ತಂದಿತ್ತು. ಈ ಮೂಲಕ ನೇಮಕ ಸಮಿತಿಯಿಂದ ಸಿಜೆಐ ಅವರನ್ನು ಹೊರಗಿಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.