ADVERTISEMENT

ಜಾಹೀರಾತುಗಳಲ್ಲಿ ಮಹಿಳೆಯ ಚಿತ್ರ ಬಳಕೆ: ಕೇಂದ್ರ, ಕರ್ನಾಟಕಕ್ಕೆ ಬಾಂಬೆ HC ನೋಟಿಸ್

ಪಿಟಿಐ
Published 17 ಮಾರ್ಚ್ 2025, 13:22 IST
Last Updated 17 ಮಾರ್ಚ್ 2025, 13:22 IST
<div class="paragraphs"><p>ಬಾಂಬೆ ಹೈಕೋರ್ಟ್</p></div>

ಬಾಂಬೆ ಹೈಕೋರ್ಟ್

   

ಮುಂಬೈ: 'ಸರ್ಕಾರದ ಜಾಹೀರಾತುಗಳಲ್ಲಿ ಅನುಮತಿ ಇಲ್ಲದೆ ಮಹಿಳೆಯ ಚಿತ್ರವನ್ನು ಬಳಸುವುದು ‘ವಾಣಿಜ್ಯ ಶೋಷಣೆ’ಯಾಗಿದ್ದು, ಸಾಮಾಜಿಕ ಮಾಧ್ಯಮ ಯುಗದಲ್ಲಿ ಇದೊಂದು ಗಂಭೀರ ವಿಷಯವಾಗಿದೆ’ ಎಂದು ಬಾಂಬೆ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ನಮ್ರತಾ ಅಂಕುಶ್ ಕವಾಳೆ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಜಿ.ಎಸ್. ಕುಲಕರ್ಣಿ ಮತ್ತು ನ್ಯಾ. ಅದ್ವೈತ್ ಸೇಥ್ನಾ ಅವರಿದ್ದ ವಿಭಾಗೀಯ ಪೀಠವು ಈ ವಿಷಯವಾಗಿ ಕೇಂದ್ರ ಮತ್ತು ನಾಲ್ಕು ರಾಜ್ಯಗಳಿಗೆ ಹಾಗೂ ಅಮೆರಿಕ ಮೂಲದ ಕಂಪನಿಗೆ ನೋಟಿಸ್ ಜಾರಿ ಮಾಡಿದೆ.‌

ADVERTISEMENT

‘ನನ್ನ ಚಿತ್ರವನ್ನು ಸ್ಥಳೀಯ ಛಾಯಾಗ್ರಾಹಕ ತುಕಾರಾಮ್ ಕಾರ್ವೆ ತೆಗೆದು ಅದನ್ನು ಶಟರ್‌ಸ್ಟಾಕ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಈ ಚಿತ್ರವನ್ನು ಕೇಂದ್ರ ಗಾಮೀಣಾಭಿವೃದ್ಧಿ ಸಚಿವಾಲಯ ಹಾಗೂ ಇತರ ನಾಲ್ಕು ರಾಜ್ಯಗಳು ತಮ್ಮ ಯೋಜನೆಗಳ ಪ್ರಚಾರದ ಜಾಹೀರಾತಿನಲ್ಲಿ ಬಳಸಿಕೊಂಡಿವೆ. ಜತೆಗೆ ಖಾಸಗಿ ಕಂಪನಿಯೊಂದು ಇದೇ ಚಿತ್ರ ಬಳಸಿಕೊಂಡು ಜಾಹೀರಾತು ಸಿದ್ಧಪಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಿದೆ’ ಎಂದು ಕವಾಳೆ ಅವರು ಅರ್ಜಿಯಲ್ಲಿ ಹೇಳಿದ್ದಾರೆ.

‘ಅರ್ಜಿಯಲ್ಲಿ ಹೇಳಲಾದ ಕೆಲವೊಂದು ವಿಷಯಗಳು ತೀರಾ ಗಂಭೀರವಾದದ್ದು. ಪ್ರಚಲಿತ ಸಂದರ್ಭದಲ್ಲಿ, ಅದರಲ್ಲೂ ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳು ಹೆಚ್ಚು ಬಳಕೆಯಲ್ಲಿರುವ ಕಾಲಘಟ್ಟದಲ್ಲಿ ಅನುಮತಿ ಇಲ್ಲದೆ ಒಬ್ಬರ ಚಿತ್ರವನ್ನು ಬಳಸುವುದು ವಾಣಿಜ್ಯ ಶೋಷಣೆಯಾಗಲಿದೆ’ ಎಂದು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.

‘ರಾಯಧನ ಮುಕ್ತ ಚಿತ್ರಗಳನ್ನು ಹೊಂದಿರುವ ಅಮೆರಿಕ ಮೂಲದ ಶಟರ್‌ಸ್ಟಾಕ್‌, ಕೇಂದ್ರ ಸರ್ಕಾರ ಹಾಗೂ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಒಡಿಶಾಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಇದರೊಂದಿಗೆ ತೆಲಂಗಾಣ ಕಾಂಗ್ರೆಸ್, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ, ಟೋಟಲ್ ಡೆಂಟಲ್ ಕೇರ್‌ ಕಂಪನಿಗೂ ಹೈಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಪ್ರತಿಯೊಬ್ಬರೂ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಲಾಗಿದೆ.

‘ಈ ಯಾವ ರಾಜ್ಯಗಳೂ ಅರ್ಜಿದಾರ ಮಹಿಳೆಯರ ಖಾಸಗಿತನವನ್ನು ರಕ್ಷಿಸುವ ಕೆಲಸ ಮಾಡಿಲ್ಲ. ಜತೆಗೆ ಅನುಮತಿ ಇಲ್ಲದೆ ಚಿತ್ರ ಬಳಸುವುದನ್ನು ಅಕ್ರಮ ಎಂದೂ ಅರಿಯಲಿಲ್ಲ. ಸರ್ಕಾರಗಳಾದರೂ ಕಾನೂನು ಪಾಲನೆ ಮಾಡಬೇಕು’ ಎಂದು ಹೈಕೋರ್ಟ್ ಚಾಟಿ ಬೀಸಿದೆ.

‘ಛಾಯಾಗ್ರಾಹಕ ತುಕಾರಾಮ್ ಕಾರ್ವೆ ಅವರು ತನ್ನ ಗ್ರಾಮದವರೇ ಆಗಿದ್ದು, ನನ್ನ ಚಿತ್ರವನ್ನು ತೆಗೆದು ಅನುಮತಿ ಇಲ್ಲದೆ ಶಟರ್‌ಸ್ಟಾಕ್‌ ಅಂತರ್ಜಾಲ ತಾಣಕ್ಕೆ ಅಪ್‌ಲೋಡ್ ಮಾಡಿದ್ದರು. ಇದೇ ಚಿತ್ರವನ್ನು ಬಳಸಿಕೊಂಡು ಜಾಹೀರಾತು ಸಿದ್ಧಪಡಿಸಿದ ಕೇಂದ್ರ ಹಾಗೂ ರಾಜ್ಯಗಳು ಎಲ್ಲೆಡೆ ಪ್ರದರ್ಶಿಸಿವೆ. ಇದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ’ ಎಂದು ದೂರಿದ್ದಾರೆ.

‘ಅನುಮತಿ ಇಲ್ಲದೆ ಬಳಸಲಾದ ಚಿತ್ರವನ್ನು ಶಾಶ್ವತವಾಗಿ ಪ್ರಸಾರವಾಗದಂತೆ ಹಾಗೂ ಅಂತರ್ಜಾಲ ತಾಣ, ಸಾಮಾಜಿಕ ಮಾಧ್ಯಮ, ಜಾಹೀರಾತುಗಳಲ್ಲಿ ಬಳಸದಂತೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.