ADVERTISEMENT

ಖರ್ಗೆ ಅಧ್ಯಕ್ಷತೆಯಲ್ಲಿ ‘ಕೈ’ ಮಹಾ ಅಧಿವೇಶನ ಶುರು: ನಡೆಯುವುದೇ CWC ಚುನಾವಣೆ?

ಪಿಟಿಐ
Published 24 ಫೆಬ್ರುವರಿ 2023, 6:17 IST
Last Updated 24 ಫೆಬ್ರುವರಿ 2023, 6:17 IST
ಕಾಂಗ್ರೆಸ್‌ ಸಂಚಾಲನಾ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ವೇಣುಗೋಪಾಲ್‌
ಕಾಂಗ್ರೆಸ್‌ ಸಂಚಾಲನಾ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ವೇಣುಗೋಪಾಲ್‌    

ರಾಯಪುರ: ಐಸಿಸಿ 85ನೇ ಮಹಾ ಅಧಿವೇಶನವು ಪಕ್ಷದ ಸಂಚಾಲನಾ ಸಮಿತಿಯ ಸಭೆಯೊಂದಿಗೆ ಛತ್ತೀಸಗಢದ ರಾಯಪುರದಲ್ಲಿ ಇಂದು ಪ್ರಾರಂಭವಾಯಿತು. ಪಕ್ಷದ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ)ಗೆ ಚುನಾವಣೆ ನಡೆಸಬೇಕೆ ಎಂಬುದರ ಬಗ್ಗೆ ಈ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಯಿತು. ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಈ ಸಭೆಗೆ ಹಾಜರಾಗಿಲ್ಲ . ಸಂಚಾಲನಾ ಸಮಿತಿ ಸಭೆಯಲ್ಲಿ ಗಾಂಧಿ ಕುಟುಂಬ ಭಾಗವಹಿಸುವುದಿಲ್ಲ ಎನ್ನಲಾಗಿದ್ದು, ಮಹಾ ಅಧಿವೇಶನಕ್ಕೆ ಬರಲಿದ್ದಾರೆ ಎಂದು ವರದಿಯಾಗಿದೆ.

2024ರ ಲೋಕಸಭೆ ಚುನಾವಣೆಗೆ ಬೇಕಾದ ಸ್ಪಷ್ಟ ಮಾರ್ಗಸೂಚಿಯನ್ನು ರೂಪಿಸುವುದೂ ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ಈ ಸಭೆಯಲ್ಲಿ ತೆಗೆದುಕೊಳ್ಳುವ ನಿರೀಕ್ಷೆಯಿದೆ. ಬಿಜೆಪಿಯನ್ನು ಎದುರಿಸಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಚುನಾವಣಾ ಮೈತ್ರಿ ರೂಪಿಸುವ ಕಾರ್ಯತಂತ್ರವನ್ನು ಈ ಸಭೆಯಲ್ಲಿ ಅಂತಿಮಗೊಳಿಸಲಾಗುತ್ತದೆ ಎನ್ನಲಾಗಿದೆ.

ADVERTISEMENT

ಭಾರತ್ ಜೋಡೋ ಯಾತ್ರೆಯ ಬೆನ್ನಿಗೇ ನಡೆಯುತ್ತಿರುವ ಮಹಾ ಅಧಿವೇಶನಕ್ಕೆ ಸುಮಾರು 15,000 ಪ್ರತಿನಿಧಿಗಳು ಆಗಮಿಸಿದ್ದಾರೆ.

ಸಿಡಬ್ಲ್ಯೂಸಿ ಸ್ಥಾನಗಳಿಗೆ ಚುನಾವಣೆ ನಡೆಯಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಈ ವಿಷಯದ ಬಗ್ಗೆ ಸಂಚಾಲನಾ ಸಮಿತಿ ನಿರ್ಧರಿಸುತ್ತದೆ’ ಎಂದು ಹೇಳಿದರು.

ಸಿಡಬ್ಲ್ಯುಸಿಗೆ ಚುನಾವಣೆ ನಡೆಸಲು ಸಮಿತಿಯು ನಿರ್ಧರಿಸಿದರೆ, ಪಕ್ಷವು ಸಿದ್ಧವಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.