ADVERTISEMENT

ಕಾಂಗ್ರೆಸ್‌ನ ವಿದೇಶಾಂಗ ವ್ಯವಹಾರ ಸಮಿತಿ ಅಧ್ಯಕ್ಷರಾಗಿ ಸಲ್ಮಾನ್ ಖುರ್ಷಿದ್ ನೇಮಕ

ಏಜೆನ್ಸೀಸ್
Published 20 ಆಗಸ್ಟ್ 2025, 16:11 IST
Last Updated 20 ಆಗಸ್ಟ್ 2025, 16:11 IST
<div class="paragraphs"><p>ಸಲ್ಮಾನ್ ಖುರ್ಷಿದ್</p></div>

ಸಲ್ಮಾನ್ ಖುರ್ಷಿದ್

   

ನವದೆಹಲಿ: ಕಾಂಗ್ರೆಸ್‌ನ ವಿದೇಶಾಂಗ ವ್ಯವಹಾರ ಸಮಿತಿಯ ಅಧ್ಯಕ್ಷರಾಗಿ ಸಲ್ಮಾನ್ ಖುರ್ಷಿದ್ ಅವರನ್ನು ನೇಮಕ ಮಾಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆದೇಶ ಹೊರಡಿಸಿದ್ದಾರೆ.

ಬ್ರಿಜೇಂದ್ರ ಸಿಂಗ್ ಮತ್ತು ಆರತಿ ಕೃಷ್ಣ ಅವರನ್ನು ವಿದೇಶಾಂಗ ವ್ಯವಹಾರಗಳ ಇಲಾಖೆಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ADVERTISEMENT

ಆಗಸ್ಟ್‌ 10ರಂದು ಕಾಂಗ್ರೆಸ್‌ ಹಿರಿಯ ನಾಯಕ ಆನಂದ್ ಶರ್ಮಾ ಅವರು ಪಕ್ಷದಲ್ಲಿ ಪುನರ್‌ರಚನೆ ಮತ್ತು ಯುವಕರಿಗೆ ಅವಕಾಶ ಕಲ್ಪಿಸುವ ಭಾಗವಾಗಿ ವಿದೇಶಾಂಗ ವ್ಯವಹಾರಗಳ ವಿಭಾಗದ ರಾಷ್ಟ್ರೀಯ ಸಮಿತಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

‘ಪಕ್ಷದಲ್ಲಿ ಯುವಕರಿಗೆ ಹೆಚ್ಚು ಅಧಿಕಾರ ಸಿಗಬೇಕು. ನನಗೆ ಅವಕಾಶ ನೀಡಿದ ನಾಯಕರಿಗೆ ಧನ್ಯವಾದ ಸಲ್ಲಿಸುವೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಶರ್ಮಾ ತಿಳಿಸಿದ್ದರು.

ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿರುವ ಆನಂದ್ ಶರ್ಮಾ 2018ರಿಂದಲೂ ಕಾಂಗ್ರೆಸ್‌ ಪಕ್ಷದ ವಿದೇಶಾಂಗ ವ್ಯವಹಾರಗಳ ವಿಭಾಗದ ರಾಷ್ಟ್ರೀಯ ಸಮಿತಿಯ ಹೊಣೆ ಹೊತ್ತಿದ್ದರು. ನಾಲ್ಕು ದಶಕಗಳಿಂದ ಸಮಿತಿಯ ಮುಂಚೂಣಿ ನಾಯಕ ಎನಿಸಿದ್ದರು.

ವಿವಿಧ ರಾಷ್ಟ್ರಗಳ ಸಮಾನ ಮನಸ್ಕ ರಾಜಕೀಯ ಪಕ್ಷಗಳೊಂದಿಗೆ ಕಾಂಗ್ರೆಸ್‌ ಸಂಬಂಧ ಗಟ್ಟಿಗೊಳಿಸುವಲ್ಲಿ ಶರ್ಮಾ ತೊಡಗಿಸಿಕೊಂಡಿದ್ದರು.

ಭಾರತ ಮತ್ತು ಅಮೆರಿಕ ನಡುವಿನ ಪರಮಾಣು ಒಪ್ಪಂದ ಸೇರಿದಂತೆ ಹಲವು ಮಹತ್ವದ ಸಂದರ್ಭಗಳಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಶರ್ಮಾ ಅವರು ವಾಣಿಜ್ಯ ಸಚಿವರಾಗಿದ್ದಾಗಲೇ ವಿಶ್ವ ವ್ಯಾಪಾರ ಒಪ್ಪಂದಕ್ಕೆ (ಡಬ್ಲ್ಯುಟಿಒ) ಭಾರತ ಸಹಿ ಮಾಡಿತ್ತು. ‘ಆಪರೇಷನ್ ಸಿಂಧೂರ’ ಕುರಿತ ಸರ್ವಪಕ್ಷ ಸಂಸದರ ಸಮಿತಿಯಲ್ಲೂ ಅವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.