ADVERTISEMENT

ಪಂಜಾಬ್‌ ರಾಜಕೀಯ: ರಾಹುಲ್‌ ನಿವಾಸದಲ್ಲಿ ನವಜೋತ್‌ ಸಿಂಗ್‌ ಸಿಧು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜೂನ್ 2021, 15:11 IST
Last Updated 30 ಜೂನ್ 2021, 15:11 IST
ಸಭೆಯೊಂದರಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಮತ್ತು ನವಜೋತ್‌ ಸಿಂಗ್‌ ಸಿಧು–ಸಾಂದರ್ಭಿಕ ಚಿತ್ರ
ಸಭೆಯೊಂದರಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಮತ್ತು ನವಜೋತ್‌ ಸಿಂಗ್‌ ಸಿಧು–ಸಾಂದರ್ಭಿಕ ಚಿತ್ರ   

ನವದೆಹಲಿ: ಪಂಜಾಬ್‌ನ ಮಾಜಿ ಸಚಿವ ಮತ್ತು ಕಾಂಗ್ರೆಸ್‌ ಮುಖಂಡ ನವಜೋತ್‌ ಸಿಂಗ್‌ ಸಿಧು ಬುಧವಾರ ರಾಹುಲ್‌ ಗಾಂಧಿ ಅವರ ನಿವಾಸಕ್ಕೆ ತೆರಳಿದ್ದಾರೆ. ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ 'ಸುದೀರ್ಘ ಸಭೆಯ' ಬಳಿಕ ರಾಹುಲ್‌ ಅವರನ್ನು ಭೇಟಿ ಮಾಡುತ್ತಿದ್ದಾರೆ.

ಪಕ್ಷದಲ್ಲಿ ನವಜೋತ್‌ ಸಿಂಗ್‌ ಸಿಧು ಅವರ ಜವಾಬ್ದಾರಿ ಅಥವಾ ಸ್ಥಾನದ ಕುರಿತು 48 ಗಂಟೆಗಳಲ್ಲಿ ಪಕ್ಷವು ಪ್ರಕಟಿಸಲಿದೆ ಎಂದು ಕಾಂಗ್ರೆಸ್‌ ಪಕ್ಷದ ಮೂಲಗಳಿಂದ ತಿಳಿದು ಬಂದಿರುವುದಾಗಿ ಇಂಡಿಯಾ ಟುಡೇ ಟಿವಿ ವರದಿ ಮಾಡಿದೆ.

ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಮತ್ತು ನವಜೋತ್‌ ಸಿಂಗ್‌ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯ, ಅನಂತರದ ವಾಗ್ದಾಳಿಗಳಿಂದ ಪಂಜಾಬ್‌ ಕಾಂಗ್ರೆಸ್‌ನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಮತ್ತು ಮುಖ್ಯಮಂತ್ರಿ ವಿರುದ್ಧ ಹಲವು ಸಂದರ್ಭಗಳಲ್ಲಿ ಸಾರ್ವಜನಿಕವಾಗಿ ನವಜೋತ್‌ ಸಿಂಗ್‌ ಸಿಧು ಟೀಕಿಸಿದ್ದಾರೆ.

ADVERTISEMENT

ಪಂಜಾಬ್‌ ಸೇರಿದಂತೆ ಕೆಲವೇ ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರ ಉಳಿಸಿಕೊಂಡಿದೆ. ಮುಂದಿನ ವರ್ಷ ಪಂಜಾಬ್‌ ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಆ ನಿಟ್ಟಿನಲ್ಲಿ ಇದು ಪ್ರಮುಖ ಬೆಳವಣಿಗೆಯಾಗಿದೆ.

ಇಂದು ಬೆಳಿಗ್ಗೆ ಪ್ರಿಯಾಂಕಾ ಅವರನ್ನು ಭೇಟಿಯಾದ ಸಿಧು, 'ಪ್ರಿಯಾಂಕಾ ಗಾಂಧಿ ಅವರೊಂದಿಗೆ ಸುದೀರ್ಘ ಸಭೆ ನಡೆಸಿದ್ದೇನೆ' ಎಂದು ಪ್ರಿಯಾಂಕಾ ಅವರೊಂದಿಗಿರುವ ಫೋಟೊಸಹಿತ ಟ್ವೀಟ್ ಮಾಡಿದ್ದರು.

2019ರ ಲೋಕಸಭೆ ಚುನಾವಣೆಯಲ್ಲಿ ಪಂಜಾಬ್‌ನ ನಗರ ಪ್ರದೇಶಗಳಲ್ಲಿ ಕಾಂಗ್ರೆಸ್‌ಗೆ ಸೋಲಾಗಿತ್ತು. ಇದಕ್ಕೆ ಸಿಧು ಅವರ ವೈಫಲ್ಯವೇ ಕಾರಣ ಎಂದು ಆರೋಪಿಸಿದ್ದ ಅಮರಿಂದರ್ ಸಿಂಗ್, ಪ್ರಮುಖ ಖಾತೆಗಳನ್ನು ಅವರ ಬಳಿಯಿಂದ ವಾಪಸ್ ಪಡೆದಿದ್ದರು. ಬಳಿಕ ಸಚಿವ ಸ್ಥಾನಕ್ಕೆ ಸಿಧು ರಾಜೀನಾಮೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.