ಹೈದರಾಬಾದ್: ವಿಧಾನಸಭೆ ಅಧಿವೇಶನಗಳಿಗೆ ಹಾಜರಾಗದ ವಿರೋಧ ಪಕ್ಷದ ನಾಯಕ ಕೆ.ಚಂದ್ರಶೇಖರ್ ರಾವ್ (ಕೆಸಿಆರ್) ಅವರ ವೇತನವನ್ನು ಹಿಂಪಡೆಯುವಂತೆ ಸ್ಪೀಕರ್ ಜಿ.ಪ್ರಸಾದ್ ಕುಮಾರ್ ಅವರನ್ನು ಕಾಂಗ್ರೆಸ್ ನಾಯಕರು ಮಂಗಳವಾರ ಒತ್ತಾಯಿಸಿದ್ದಾರೆ.
ಹೈದರಾಬಾದ್‌ನಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಆಗಿರುವ ದರಿಪಲ್ಲಿ ರಾಜಶೇಖರ್ ರೆಡ್ಡಿ ಹಾಗೂ ಇತರ ನಾಯಕರು ವೇತನ ವಾಪಸ್‌ಗೆ ಸಂಬಂಧಿಸಿದಂತೆ ಸ್ಪೀಕರ್‌ಗೆ ಮನವಿ ಸಲ್ಲಿಸಿದ್ದಾರೆ.
ತೆಲಂಗಾಣ ವಿಧಾನಸಭೆಯಲ್ಲಿ ಇಂದಿನಿಂದ (ಬುಧವಾರದಿಂದ) ಬಜೆಟ್ ಅಧಿವೇಶನ ಆರಂಭವಾಗಿದೆ.
'ವಿರೋಧ ಪಕ್ಷದ ನಾಯಕ ಸೇರಿದಂತೆ ಚುನಾಯಿತ ಜನ ಪ್ರನಿಧಿಗಳು ರಾಜ್ಯದ ಒಳಿತಿಗಾಗಿ ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸುತ್ತಾರೆ ಎಂಬ ಭರವಸೆಯಿಂದ ಅವರ ವೇತನಕ್ಕೆ ತೆರಿಗೆದಾರರು ಕೊಡುಗೆ ನೀಡುತ್ತಾರೆ' ಎಂದಿರುವ ಕಾಂಗ್ರೆಸ್ ನಾಯಕರು, 'ಆದಾಗ್ಯೂ, ಕೆ. ಚಂದ್ರಶೇಖರ್ ರಾವ್ ಅವರು ವಿಧಾನಸಭೆ ಅಧಿವೇಶನಗಳಿಗೆ ನಿರಂತರವಾಗಿ ಗೈರಾಗುತ್ತಿದ್ದಾರೆ. ಅವರು, ವಿರೋಧ ಪಕ್ಷದ ನಾಯಕನ ಜವಾಬ್ದಾರಿಗಳನ್ನು ನಿರ್ಲಕ್ಷಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ' ಎಂದು ತಿಳಿಸಿದ್ದಾರೆ.
'ವಿರೋಧ ಪಕ್ಷದ ನಾಯಕನ ಕರ್ತವ್ಯ ನಿಭಾಯಿಸುವವರೆಗೆ ಕೆ.ಚಂದ್ರಶೇಖರ್ ರಾವ್ ಅವರಿಗೆ ವೇತನ ಪಾವತಿಸುವುದನ್ನು ಪುನರ್‌ಪರಿಶೀಲನೆ ನಡೆಸಬೇಕು' ಎಂದು ಒತ್ತಾಯಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಯೂ ಆಗಿರುವ ಕೆಸಿಆರ್ ಅವರು, 2023ರ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದಾಗಿನಿಂದ ವಿಧಾನಸಭೆ ಅಧಿವೇಶನಗಳಿಗೆ ನಿರಂತರವಾಗಿ ಗೈರಾಗಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಹಾಗೂ ಇತರ ಕಾಂಗ್ರೆಸ್ ನಾಯಕರು ಆಗಾಗ್ಗೆ ಟೀಕಾ ಪ್ರಹಾರ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.