ಹಿಮಂತ ಬಿಸ್ವಾ ಶರ್ಮಾ, ಅಸ್ಸಾಂ ಮುಖ್ಯಮಂತ್ರಿ
– ಪಿಟಿಐ ಚಿತ್ರ
ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ವಿರುದ್ಧ ದೇಶದ್ರೋಹದ ಗಂಭೀರ ಆರೋಪ ಮಾಡಿದ್ದಾರೆ.
ಅಸ್ಸಾಂ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಈ ಆರೋಪ ಮಾಡಿರುವುದು ಹೆಚ್ಚು ಗಂಭೀರತೆ ಪಡೆದುಕೊಂಡಿದೆ. ಸಂಸದ ಗೌರವ್ ಗೊಗೊಯ್ ಕೂಡ ಮುಖ್ಯಮಂತ್ರಿಗಳ ಆರೋಪವನ್ನು ಈ ಹಿಂದೆ ತಳ್ಳಿ ಹಾಕಿದ್ದರು.
ಸದ್ಯ ಗೌರವ್ ಹಾಗೂ ಅವರ ಪತ್ನಿ ಮೇಲಿನ ದೇಶದ್ರೋಹದ ಆರೋಪವನ್ನು ಎಸ್‌ಐಟಿ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.
ಭಾನುವಾರ ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿಮಂತ ಶರ್ಮಾ, ಗೌರವ್ ಗೊಗೊಯ್ ಅವರು ಬೇಹುಗಾರಿಕೆ ನಡೆಸಿ ಬ್ರಿಟನ್ ಮೂಲದ ತಮ್ಮ ಪತ್ನಿ ಎಲಿಜಬೆತ್ ಕೋಲ್‌ಬರ್ನ್ ಮೂಲಕ ದೇಶದ ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ಹಂಚಿಕೊಂಡಿದ್ದಾರೆ ಎಂದರು.
ಇಸ್ಲಾಮಾಬಾದಿನ ಕಂಪನಿಯೊಂದರಲ್ಲಿ ಎಲಿಜಬೆತ್ ಕೋಲ್‌ಬರ್ನ್ ಕೆಲಸ ಮಾಡುತ್ತಿದ್ದಾಗ ಪಾಕಿಸ್ತಾನ ಯೋಜನಾ ಆಯೋಗದ ಮಾಜಿ ಸಲಹೆಗಾರ ತೌಕೀರ್ ಶೇಖ್ ಅವರು ಎಲಿಜಬೆತ್‌ಗೆ ಮೇಲಧಿಕಾರಿಯಾಗಿದ್ದರು. ತೌಕೀರ್ ಶೇಖ್‌ಗೆ ಐಎಸ್‌ಐ ಜೊತೆ ನಿಕಟ ಸಂಪರ್ಕ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದರು.
ಮುಂದುವರೆದು ಮಾತನಾಡಿದ ಹಿಮಂತ ಶರ್ಮಾ, ಎಲಿಜಬೆತ್ ಅವರಿಗೆ ಪಾಕಿಸ್ತಾನ, ವಿಶೇಷವಾಗಿ ಐಎಸ್‌ಐ ಜೊತೆ ಸಂಪರ್ಕವಿರುವುದು ಪ್ರಾಥಮಿಕ ತನಿಖೆಗಳಿಂದ ತಿಳಿದುಬಂದಿದೆ ಎಂದರು.
ಎಲಿಜಬೆತ್ ಅವರು ತೌಕೀರ್ ಶೇಖ್‌ಗೆ ರಹಸ್ಯ ದಾಖಲೆಗಳನ್ನು ಹಂಚಿಕೊಂಡಿರುವ ಬಗ್ಗೆ ಎಸ್‌ಐಟಿ ಅನುಮಾನ ವ್ಯಕ್ತಪಡಿಸಿದೆ. ಪಾಕಿಸ್ತಾನದ ‘ಲೀಡ್ ಪಾಕಿಸ್ತಾನ್’ ಎಂಬ ಸಂಸ್ಥೆ ಮೂಲಕ ಹಣಕಾಸು ವ್ಯವಹಾರ ನಡೆದಿರುವುದನ್ನು ಎಸ್‌ಐಟಿ ಪತ್ತೆ ಹಚ್ಚಿದೆ ಎಂದು ಹೇಳಿದರು.
ಕೇಂದ್ರ ಗೃಹ ಸಚಿವಾಲಯದ(ಎಂಎಚ್‌ಎ) ತನಿಖೆಗೆ ಈ ಪ್ರಕರಣವನ್ನು ಒಪ್ಪಿಸಲು ನಮ್ಮ ಸರ್ಕಾರ ನಿರ್ಧರಿಸಿದೆ ಎಂದ ಅವರು, ಗೃಹ ಸಚಿವಾಲಯ ಒಪ್ಪಿಗೆ ಸೂಚಿಸಿದ ಕೂಡಲೇ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ ಎಂದು ಹಿಮಂತ ಶರ್ಮಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.