ADVERTISEMENT

24 ವರ್ಷಗಳ ಬಳಿಕ ಗಾಂಧಿಯೇತರ ಕುಟುಂಬದ ವ್ಯಕ್ತಿಗೆ ಕಾಂಗ್ರೆಸ್ ಚುಕ್ಕಾಣಿ

ಪಕ್ಷದ ಅಧ್ಯಕ್ಷೀಯ ಚುನಾವಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಸೆಪ್ಟೆಂಬರ್ 2022, 11:26 IST
Last Updated 27 ಸೆಪ್ಟೆಂಬರ್ 2022, 11:26 IST
ಪ್ರಿಯಾಂಕ ಗಾಂಧಿ ವಾದ್ರಾ, ರಾಹುಲ್‌ ಗಾಂಧಿ ಹಾಗೂ ಸೋನಿಯಾ ಗಾಂಧಿ (ಪಿಟಿಐ ಚಿತ್ರ)
ಪ್ರಿಯಾಂಕ ಗಾಂಧಿ ವಾದ್ರಾ, ರಾಹುಲ್‌ ಗಾಂಧಿ ಹಾಗೂ ಸೋನಿಯಾ ಗಾಂಧಿ (ಪಿಟಿಐ ಚಿತ್ರ)   

ನವದೆಹಲಿ: ದೇಶದ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ಗೆ 24 ವರ್ಷಗಳ ನಂತರ ಗಾಂಧಿ ಕುಟುಂಬದವರಲ್ಲದ ವ್ಯಕ್ತಿಯೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ.

ಬ್ರಿಟೀಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ 137 ವರ್ಷಗಳ ಹಿಂದೆ (1885ರಲ್ಲಿ) ಸ್ಥಾಪನೆಯಾದ ಕಾಂಗ್ರೆಸ್‌, ಸ್ವಾತಂತ್ರ್ಯಾನಂತರ ಸಾಕಷ್ಟು ವರ್ಷ ಕೇಂದ್ರದಲ್ಲಿ ಅಧಿಕಾರ ನಡೆಸಿದೆ. ಆದರೆ, ಕಳೆದ ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ದೇಶದಾದ್ಯಂತ ನೆಲೆ ವಿಸ್ತರಿಸಿಕೊಂಡಿದ್ದು, ಕಾಂಗ್ರೆಸ್‌ ಭಾರಿ ಹಿನ್ನಡೆ ಅನುಭವಿಸಿದೆ.

ಸೋನಿಯಾ ಗಾಂಧಿ ಅವರು 1998ರಿಂದ 2017ರ ವರೆಗೆ ಪಕ್ಷದ ಅಧ್ಯಕ್ಷರಾಗಿದ್ದರು. 2017ರಿಂದ 19ರ ಅವಧಿಯಲ್ಲಿ ರಾಹುಲ್ ಗಾಂಧಿ ಪಕ್ಷದ ನೇತೃತ್ವ ವಹಿಸಿಕೊಂಡಿದ್ದರು.

ADVERTISEMENT

ರಾಹುಲ್‌ ಗಾಂಧಿ ಅವರನ್ನು 'ದುರ್ಬಲ' ನಾಯಕ ಎಂದು ಟೀಕಿಸಿ, ನಾಯಕತ್ವದ ವಿರುದ್ಧವೇ ಧ್ವನಿ ಎತ್ತಿದ್ದ ಕಾಂಗ್ರೆಸ್‌ನ ಹಲವು ನಾಯಕರುಪಕ್ಷವನ್ನು ತೊರೆದಿದ್ದಾರೆ. ಸಾಕಷ್ಟು ಮಂದಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಸೋನಿಯಾ ಅವರು ತಾತ್ಕಾಲಿಕ ಅಧ್ಯಕ್ಷರಾಗಿ ಮತ್ತೆ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ.

ಹೊಸ ನಾಯಕರ ಆಯ್ಕೆ
ಈ ಬಾರಿ ನಡೆಯುವ ಪಕ್ಷದ ಅಧ್ಯಕ್ಷೀಯ ಚುನಾವಣೆಯಿಂದ ದೂರ ಉಳಿಯಲುಗಾಂಧಿ ಕುಟುಂಬದವರಾದಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ವಾದ್ರಾ ನಿರ್ಧರಿಸಿದ್ದಾರೆ.

ಕೇರಳದ ತಿರುವನಂತಪುರ ಕ್ಷೇತ್ರದ ಸಂಸದ ಶಶಿ ತರೂರ್‌ ಅವರು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಗಾಂಧಿ ಕುಟುಂಬದ ಆಪ್ತ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಸ್ಪರ್ಧಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ರಾಜಸ್ಥಾನದ ಮುಂದಿನ ಸಿಎಂ ಆಯ್ಕೆ ವಿಚಾರವಾಗಿ ಪಕ್ಷದಲ್ಲಿ ಬಿಕ್ಕಟ್ಟು ತಲೆದೋರಿದ್ದು, ಅವರು ಸ್ಪರ್ಧಿಸುವುದು ಅನುಮಾನ ಎನ್ನಲಾಗುತ್ತಿದೆ.

ಹಿರಿಯ ನಾಯಕಿ ಸೆಲ್ಜಾ ಕುಮಾರಿ ಅಥವಾ ರಾಹುಲ್ ಗಾಂಧಿ ಅವರ ಆಪ್ತರೆನಿಸಿಕೊಂಡಿರುವ ಕೆ.ಸಿ. ವೇಣುಗೋಪಾಲ್ ಅವರ ಹೆಸರಗಳೂ ಕೇಳಿಬರುತ್ತಿವೆ.

ಸುಮಾರು 9 ಸಾವಿರ ಪ್ರತಿನಿಧಿಗಳು ಹೊಸ ಅಧ್ಯಕ್ಷರ ಆಯ್ಕೆಗೆ ಮತ ಚಲಾಯಿಸಲಿದ್ದಾರೆ.

ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹೀಗಾಗಿ ಅಕ್ಟೋಬರ್‌ 17ರಂದು ಚುನಾವಣೆ ನಿಗಧಿಯಾಗಿದೆ. ಪ್ರಕ್ರಿಯೆಗಳನ್ನು ಸೆಪ್ಟೆಂಬರ್‌ 22ರಿಂದಲೇ ಆರಂಭಿಸಲಾಗಿದೆ ಎಂದು ಕಾಂಗ್ರೆಸ್‌ ಚುನಾವಣಾ ಪ್ರಾಧಿಕಾರದ ಕಾರ್ಯದರ್ಶಿ ಪ್ರಣವ್‌ ಝಾ ತಿಳಿಸಿದ್ದಾರೆ.

ಸ್ವಾತಂತ್ರ್ಯ ನಂತರ 4ನೇ ಬಾರಿ ಚುನಾವಣೆ
ಸ್ವಾತಂತ್ರ್ಯ ನಂತರಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ನಾಲ್ಕನೇ ಬಾರಿಗೆ ಚುನಾವಣೆ ನಡೆಯುತ್ತಿದೆ. ಈ ಹಿಂದೆ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದ ಕಾರಣ 1950, 1997 ಹಾಗೂ 2000ರಲ್ಲಿ ಮಾತ್ರವೇ ಚುನಾವಣೆಗಳು ನಡೆದಿವೆ.‌

1950ರಲ್ಲಿ ಆಗಿನ ಪ್ರಧಾನಿ ಜವಾಹರಲಾಲ್‌ ನೆಹರೂ ಬೆಂಬಲಿತ ಅಭ್ಯರ್ಥಿ ಆಚಾರ್ಯ ಕೃಪಲಾನಿ ಹಾಗೂ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರ ನಂಬಿಕಸ್ಥರಾಗಿದ್ದ ಪುರುಷೋತ್ತಮ್‌ ದಾಸ್ ಟಂಡನ್‌ ಜಯ ಸಾಧಿಸಿದ್ದರು.

ಅದಾಗಿ 47 ವರ್ಷಗಳ ನಂತರ (1997) ಎರಡನೇ ಬಾರಿ ಚುನಾವಣೆ ನಿಗದಿಯಾಗಿತ್ತು. ಆಗ ಸೀತಾರಾಂ ಕೇಸರಿ, ಶರದ್‌ ಪವಾರ್ ಮತ್ತು ರಾಜೇಶ್‌ ಪೈಲಟ್‌ ಕಣದಲ್ಲಿದ್ದರು. ಕೇಸರಿ ಅವರು ವಿಜಯಿಯಾಗಿದ್ದರು.

2000ರಲ್ಲಿ ಸೋನಿಯಾ ಗಾಂಧಿ ಹಾಗೂ ಜಿತೇಂದ್ರ ಪ್ರಸಾದ ಕಣಕ್ಕಿಳಿದಿದ್ದರು. ಆಗ ಸೋನಿಯಾ 7,400ಕ್ಕೂ ಅಧಿಕ ಮತಗಳನ್ನು ಪಡೆದರೆ, ಪ್ರಸಾದ ಅವರಿಗೆ 94 ಮತಗಳಷ್ಟೇ ಲಭಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.