ADVERTISEMENT

ಸೋನಿಯಾ, ರಾಹುಲ್ ವಿರುದ್ಧ ED ದೋಷಾರೋಪ: ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಪಿಟಿಐ
Published 16 ಏಪ್ರಿಲ್ 2025, 7:06 IST
Last Updated 16 ಏಪ್ರಿಲ್ 2025, 7:06 IST
<div class="paragraphs"><p>ದೆಹಲಿಯಲ್ಲಿ ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾ‍‍ಪ್‌ಗಢಿ ನೇತೃತ್ವದಲ್ಲಿ ಪ್ರತಿಭಟನೆ</p></div>

ದೆಹಲಿಯಲ್ಲಿ ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾ‍‍ಪ್‌ಗಢಿ ನೇತೃತ್ವದಲ್ಲಿ ಪ್ರತಿಭಟನೆ

   

–ಪಿಟಿಐ ಚಿತ್ರ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ಹಿರಿಯ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯ ಆರೋಪಪಟ್ಟಿ ಸಲ್ಲಿಸಿದನ್ನು ಖಂಡಿಸಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಅಕ್ಬರ್ ರಸ್ತೆಯ 24ನೇ ಸಂಖ್ಯೆಯಲ್ಲಿರುವ ಕಾಂಗ್ರೆಸ್ ಕಚೇರಿಯ ಹೊರಗೆ ಬುಧವಾರ ಪ್ರತಿಭಟನೆ ನಡೆಸಿದರು.

ADVERTISEMENT

ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಏಪ್ರಿಲ್ 9 ರಂದು ಆರೋಪಪಟ್ಟಿ ಸಲ್ಲಿಸಿರುವುದಾಗಿ ಜಾರಿ ನಿರ್ದೇಶನಾಲಯ ಮಂಗಳವಾರ ತಿಳಿಸಿತ್ತು. ಸೋನಿಯಾ ಮತ್ತು ರಾಹುಲ್ ಗಾಂಧಿ ಜೊತೆಗೆ, ಆರೋಪಪಟ್ಟಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ಸ್ಯಾಮ್ ಪಿತ್ರೋಡಾ ಮತ್ತು ಸುಮನ್ ದುಬೆ ಅವರನ್ನೂ ಸಹ ಆರೋಪಿಗಳೆಂದು ಹೆಸರಿಸಲಾಗಿದೆ.

ಪ್ರತಿಭಟನೆಯಲ್ಲಿ ಹಾಜರಿದ್ದ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾತೆ, ಕೇಂದ್ರದ ಈ ಕ್ರಮವನ್ನು ಟೀಕಿಸಿದ್ದಾರೆ. ಇದು ಗಾಂಧಿ ಕುಟುಂಬ ಮತ್ತು ಕಾಂಗ್ರೆಸನ್ನು ಗುರಿಯಾಗಿಸುವ ಪ್ರಯತ್ನ ಎಂದು ಹೇಳಿದ್ದಾರೆ.

‘ಇದು 12 ವರ್ಷಗಳ ಹಿಂದಿನ ಪ್ರಕರಣ. ಅವರು ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ದಾಖಲಿಸಿದ್ದಾರೆ. ಅಲ್ಲಿ ಒಂದು ಪೈಸೆಯೂ ವಿನಿಮಯ ಆಗಿಲ್ಲ. ಸರ್ಕಾರ ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ ಅನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಆದರೆ ನಾವು ಅವರ ವಿರುದ್ಧ ಹೋರಾಟ ಮಾಡುತ್ತೇವೆ’ ಎಂದು ಶ್ರೀನಾತೆ ಹೇಳಿದ್ದಾರೆ.

‘ರಾಹುಲ್ ಗಾಂಧಿಯವರ ರಾಜಕೀಯ ವಿಧಾನ ಮತ್ತು ಅವರು ಪ್ರಸ್ತಾಪಿಸುವ ವಿಷಯಗಳಿಂದಾಗಿ ಬಿಜೆಪಿ ಅವರಿಗೆ ಹೆದರುತ್ತಿದೆ’ ಎಂದು ಶ್ರೀನಾತೆ ಹೇಳಿದ್ದಾರೆ.

ಇ.ಡಿಯ ಈ ಕ್ರಮಕ್ಕೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಆರೋಪಪಟ್ಟಿ ‘ಪ್ರತೀಕಾರದ ರಾಜಕೀಯ‘ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.