
ಪ್ರಧಾನಿ ಮೋದಿ
ಪಿಟಿಐ ಚಿತ್ರ
ಗುವಾಹಟಿ: ‘ದೇಶದ ಸೇನೆಯನ್ನು ಬೆಂಬಲಿಸುವ ಬದಲಿಗೆ ಕಾಂಗ್ರೆಸ್ ಪಕ್ಷವು ಪಾಕಿಸ್ತಾನ ಬೆಳೆಸಿದ ಭಯೋತ್ಪಾದಕರನ್ನು ಬೆಂಬಲಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಅಸ್ಸಾಂನ ದರ್‍ರಾಂಗ್ ಜಿಲ್ಲೆಯ ಮಂಗಲ್‌ದೋಯಿಯಲ್ಲಿ ಭಾನುವಾರ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ದೇಶದ ಅತ್ಯಂತ ಹಳೆಯ ಪಕ್ಷವು ನುಸುಳುಕೋರರು ಮತ್ತು ದೇಶ ವಿರೋಧಿ ಶಕ್ತಿಗಳನ್ನು ರಕ್ಷಿಸುತ್ತಿದೆ’ ಎಂದು ಆರೋಪಿಸಿದರು.
‘ನುಸುಳುಕೋರರ ಮೂಲಕ ದೇಶದ ಜನಸಂಖ್ಯಾ ಸ್ವರೂಪವನ್ನು ಬದಲಿಸಲು ಮತ್ತು ಭೂಮಿಯನ್ನು ಕಬಳಿಸಲು ಪಿತೂರಿ ನಡೆದಿದೆ. ಇದು ರಾಷ್ಟ್ರೀಯ ಭದ್ರತೆಗೆ ಗಂಭೀರ ಬೆದರಿಕೆವೊಡ್ಡುತ್ತಿದೆ. ಆದರೆ, ಅವರ ಯೋಜನೆ ಯಶಸ್ವಿಯಾಗಲು ಬಿಜೆಪಿ ಅವಕಾಶ ನೀಡುವುದಿಲ್ಲ. ಈ ಸವಾಲನ್ನು ಎದುರಿಸಲು ದೇಶದಾದ್ಯಂತ ಉನ್ನತ ಮಟ್ಟದ ಜನಸಂಖ್ಯಾ ಮಿಷನ್‌ಗೆ ಚಾಲನೆ ನೀಡಲಾಗಿದೆ’ ಎಂದು ಪ್ರಧಾನಿ ಹೇಳಿದರು.
‘ಇಂಥ ನುಸುಳುಕೋರರಿಂದ ಅಸ್ಸಾಂ ಮತ್ತು ದೇಶವನ್ನು ರಕ್ಷಿಸುತ್ತೇವೆ. ಇದಕ್ಕಾಗಿ ಎಂಥ ಹೋರಾಟಕ್ಕೂ ಸಿದ್ಧರಿದ್ದೇವೆ’ ಎಂದು ಅವರು ಹೇಳಿದರು.
‘ಆಪರೇಷನ್ ಸಿಂಧೂರ’ದ ವೇಳೆ ಭಾರತದ ಸೇನೆಯು ಪಾಕಿಸ್ತಾನದಲ್ಲಿ ಭಯೋತ್ಪಾದಕರ ಮೂಲ ಸೌಕರ್ಯಗಳನ್ನು ನಾಶ ಮಾಡಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ದೇಶದ ಸೇನೆಗೆ ಬೆಂಬಲ ನೀಡುವ ಬದಲಿಗೆ ಪಾಕಿಸ್ತಾನ ಪೋಷಿಸಿದ ಭಯೋತ್ಪಾದಕರನ್ನು ಬೆಂಬಲಿಸಿತ್ತು’ ಎಂದು ಅವರು ದೂರಿದರು.
ಮಾತೆ ಕಾಮಾಕ್ಯ ದೇವಿಯ ಆಶೀರ್ವಾದದಿಂದಾಗಿ ‘ಆಪರೇಷನ್ ಸಿಂಧೂರ’ ಯಶಸ್ವಿಯಾಗಿದೆ ಎಂದು ಅವರು ವಿವರಿಸಿದರು.
ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಮಾತನಾಡಿದ್ದ ವಿಡಿಯೊವೊಂದನ್ನು ಶನಿವಾರ ರಾತ್ರಿ ನನಗೆ ತೋರಿಸಿದರು. ‘ಬಿಜೆಪಿಯು ಗಾಯಕರು ಮತ್ತು ನರ್ತಕರನ್ನು ಗೌರವಿಸುತ್ತಿದೆ’ ಎಂದು ಆ ನಾಯಕ ಹೇಳಿದ ವಿಡಿಯೊ ಅದಾಗಿತ್ತು ಎಂದು ಮೋದಿ ವಿವರಿಸಿದರು.
2019ರಲ್ಲಿ ಬಿಜೆಪಿಯು ಸಂಗೀತ ಮಾಂತ್ರಿಕ ಭೂಪೇನ್ ಹಜಾರಿಕಾ ಅವರಿಗೆ ‘ಭಾರತ ರತ್ನ’ ನೀಡಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷರು ಈ ಹೇಳಿಕೆ ನೀಡಿದ್ದರು ಎಂದು ಅವರು ತಿಳಿಸಿದರು.
‘1962ರಲ್ಲಿ ಚೀನಾ ಆಕ್ರಮಣದ ವೇಳೆ ಜವಾಹರಲಾಲ್ ನೆಹರೂ ಅವರು ಅಸ್ಸಾಂ ಜನರಿಗೆ ಮಾಡಿದ ಗಾಯಗಳೇ ಇನ್ನೂ ಮಾಯವಾಗಿಲ್ಲ. ಜತೆಗೆ ನಾಡಿನ ಪ್ರಸಿದ್ಧ ಗಾಯಕ ಭೂಪೇನ್ ಹಜಾರಿಕಾ ಅವರನ್ನು ಕಾಂಗ್ರೆಸ್ ಅವಮಾನಿಸುವ ಮೂಲಕ ಗಾಯದ ಮೇಲೆ ಉಪ್ಪು ಸವರಿದೆ’ ಎಂದು ಪ್ರಧಾನಿ ಟೀಕಿಸಿದರು.
ಈ ಕುರಿತ ಕಾಂಗ್ರೆಸ್‌ನ ಟೀಕೆಗಳಿಂದ ನನಗೆ ತೀವ್ರ ನೋವಾಗಿದೆ. ಆದರೆ ಸಂಗೀತ ಮಾಂತ್ರಿಕನಿಗೆ ಭಾರತ ರತ್ನ ಘೋಷಿಸಿದ ಬಿಜೆಪಿಯ ನಡೆ ಸರಿಯೋ, ತಪ್ಪೋ ಎಂಬುದನ್ನು ಜನರು ನಿರ್ಧರಿಸುತ್ತಾರೆ’ ಎಂದು ಹೇಳಿದರು.
ಕಚ್ಚಾತೈಲ ಆಮದು ಕಡಿಮೆಗೊಳಿಸಲು ಕ್ರಮ: ಪ್ರಧಾನಿ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಚ್ಚಾ ತೈಲ ಮತ್ತು ಅನಿಲ ಆಮದನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು. ಇದಕ್ಕೆ ಪರ್ಯಾಯವಾಗಿ ಪಳೆಯುಳಿಕೆ ಇಂಧನ ಮತ್ತು ಹಸಿರು ಇಂಧನ ಪರಿಶೋಧನೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. ನುಮಾಲಿಗಢದಲ್ಲಿ ಸುಮಾರು ₹12000 ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಯೋಜನೆಗಳ ಉದ್ಘಾಟನೆ ಮತ್ತು ಶಂಕಸ್ಥಾಪನೆ ನೆರವೇರಿಸಿದ ಬಳಿಕ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವಿಶ್ವದಲ್ಲಿಯೇ ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ. ಆದರೆ ದೇಶವು ಕಚ್ಚಾ ತೈಲ ಮತ್ತು ಅನಿಲಕ್ಕಾಗಿ ವಿದೇಶಗಳ ಮೇಲೆ ಅವಲಂಬಿತವಾಗಿದೆ. ಅದನ್ನು ಕಡಿಮೆ ಮಾಡುವುದಕ್ಕಾಗಿ ಪರ್ಯಾಯ ಯೋಜನೆಗಳತ್ತ ಗಮನ ಹರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.