ADVERTISEMENT

POK ಭಾರತದ ವಶಕ್ಕೆ; 1994ರ ನಿರ್ಣಯ ಪುನರುಚ್ಚಾರಕ್ಕೆ ಕಾಂಗ್ರೆಸ್ ಆಗ್ರಹ

ಕಾಶ್ಮೀರ ಸಮಸ್ಯೆಯ 'ಅಂತರರಾಷ್ಟ್ರೀಯಕರಣ'ವನ್ನು ಒಪ್ಪಲಾಗದು: ಸಚಿನ್ ಪೈಲಟ್

ಶಮಿನ್‌ ಜಾಯ್‌
Published 11 ಮೇ 2025, 10:36 IST
Last Updated 11 ಮೇ 2025, 10:36 IST
   

ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಸಂಘರ್ಷ, ಕದನ ವಿರಾಮ ಕುರಿತು ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಇದರ ಬೆನ್ನಲ್ಲೇ, ಪಾಕಿಸ್ತಾನವು ಪಾಕ್‌ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ತೊರೆಯುವಂತೆ 1994ರಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿರುವ ನಿರ್ಣಯವನ್ನು ಪುನರುಚ್ಚರಿಸಬೇಕು ಎಂದು ಕಾಂಗ್ರೆಸ್‌ ಪಕ್ಷ ಭಾನುವಾರ ಪ್ರತಿಪಾದಿಸಿದೆ.

ಭಾರತ ಮತ್ತು ಪಾಕಿಸ್ತಾನ ನಡುವಣ ಕದನ ವಿರಾಮ ಒಪ್ಪಂದವನ್ನು ಅಮೆರಿಕ ಘೋಷಿಸಿದ್ದು ದೋಷಪೂರಿತ ಎಂದಿರುವ ಕಾಂಗ್ರೆಸ್‌, ಕಾಶ್ಮೀರ ಸಮಸ್ಯೆಯನ್ನು ಅಂತರರಾಷ್ಟ್ರೀಯಕರಣಗೊಳಿಸುವುದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಒತ್ತಿ ಹೇಳಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಸಾವಿರಾರು ವರ್ಷಗಳಿಂದಲೂ ಇರುವ ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವೇ ಎಂಬ ಬಗ್ಗೆ ಇಬ್ಬರ (ಭಾರತ, ಪಾಕಿಸ್ತಾನ) ಜೊತೆ ಕೆಲಸ ಮಾಡಲು ಬಯಸುವುದಾಗಿ ಇತ್ತೀಚೆಗೆ ಹೇಳಿದ್ದರು. ಆ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಿಡಿಕಾರಿದೆ.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಸಚಿನ್‌ ಪೈಲಟ್‌, 'ಅಮೆರಿಕ ಅಧ್ಯಕ್ಷ ಹಾಗೂ ಆ ದೇಶದ ಇತರ ಅಧಿಕಾರಿಗಳ ಹೇಳಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು. ಹಾಗೆಯೇ, ತಾನು ಹೊಂದಿರುವ ಬದ್ಧತೆಗಳೇನು, ಕದನ ವಿರಾಮ ಘೋಷಣೆಗೂ ಮುನ್ನ ಪಾಕ್‌ನಿಂದ ಪಡೆದದ್ದೇನು ಎಂಬುದನ್ನು ತಿಳಿಸಬೇಕು' ಎಂದು ಕೇಳಿದ್ದಾರೆ.

'ಟ್ರಂಪ್ ಅವರು ಕದನ ವಿರಾಮ ಘೋಷಿಸಿದ್ದು ನಮ್ಮಲ್ಲಿ ಅಚ್ಚರಿ ಮೂಡಿಸಿದೆ. ಈ ರೀತಿ ಆಗುತ್ತಿರುವುದು ಇದೇ ಮೊದಲು. ಕಾಂಗ್ರೆಸ್‌ ಪಕ್ಷವು ಸರ್ವಪಕ್ಷ ಸಭೆ ಹಾಗೂ ವಿಶೇಷ ಅಧಿವೇಶನಕ್ಕೆ ಒತ್ತಾಯಿಸುತ್ತಿದೆ. ಪಾಕ್‌ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಮತ್ತು ನಾವು ಅದನ್ನು ಮರಳಿ ಪಡೆಯುತ್ತೇವೆ ಎಂಬುದಾಗಿ 1994ರಲ್ಲಿ ಅಂಗೀಕರಿಸಲಾದ ನಿರ್ಣಯವನ್ನು ಮತ್ತೆ ಪುನರುಚ್ಚರಿಸಬೇಕಿದೆ' ಎಂದು ಒತ್ತಿ ಹೇಳಿದ್ದಾರೆ.

ಭಯೋತ್ಪಾದನಾ ದಾಳಿಗಳ ನಂತರ 1994ರ ಫೆಬ್ರುವರಿ 22ರಂದು, ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ. ಅದನ್ನು ಪ್ರತ್ಯೇಕಿಸುವ ಯಾವುದೇ ಪ್ರಯತ್ನಗಳನ್ನು ಸೂಕ್ತ ರೀತಿಯಲ್ಲಿ ಹಿಮ್ಮೆಟ್ಟಿಸಲಾಗುವುದು ಎಂಬುದಾಗಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ದೃಢ ನಿರ್ಣಯ ಕೈಗೊಳ್ಳಲಾಗಿತ್ತು. ಹಾಗೆಯೇ, ಪಾಕಿಸ್ತಾನವು ಆಕ್ರಮಣಕಾರಿಯಾಗಿ ವಶಕ್ಕೆ ಪಡೆದಿರುವ ಜಮ್ಮು ಮತ್ತು ಕಾಶ್ಮೀರದ ಪ್ರದೇಶಗಳನ್ನು ತೊರೆಯಬೇಕು. ದೇಶದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ಯತ್ನವನ್ನು ಬಲವಾಗಿ ಎದುರಿಸಲಾಗುವುದು ಎಂದು ಎಚ್ಚರಿಸಲಾಗಿತ್ತು.

'ಇದೇ ನಿರ್ಣಯವನ್ನು ಪುನರುಚ್ಚರಿಸಬೇಕಾದ ಸಮಯ ಇದಾಗಿದೆ. ಆ ನಿಲುವಿನಲ್ಲೇನಾದರೂ ಬದಲಾವಣೆಗಳಿದ್ದರೆ, ಆ ಕುರಿತು ಮೊದಲು ಚರ್ಚಿಸಬೇಕು. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಆ ನಿರ್ಣಯವನ್ನು ಅಂಗೀಕರಿಸಲಾಗಿತ್ತು. ನಮ್ಮ ನಿಲುವಿನಲ್ಲೇನೂ ಬದಲಾವಣೆಗಳಿಲ್ಲ' ಎಂದು ಖಚಿತಪಡಿಸಿದ್ದಾರೆ.

ಕಾಶ್ಮೀರ ಸಮಸ್ಯೆ ಕುರಿತ ಚರ್ಚೆಯನ್ನು ತಟಸ್ಥ ಸ್ಥಳದಲ್ಲಿ ನಡೆಸಲಾಗುವುದು ಎಂದು ಅಮೆರಿಕ ಹೇಳಿದೆ ಎಂದಿರುವ ಪೈಲಟ್‌, 'ಇದು ಚಿಂತಾಜನಕ. ಕಾಶ್ಮೀರ ಸಮಸ್ಯೆಯನ್ನು ಅಂತರರರಾಷ್ಟ್ರೀಯಕರಣಗೊಳಿಸುವುದನ್ನು ಒಪ್ಪಲು ಸಾಧ್ಯವಿಲ್ಲ' ಎಂದು ಒತ್ತಿ ಹೇಳಿದ್ದಾರೆ. ಮುಂದುವರಿದು, ಪಾಕಿಸ್ತಾನಕ್ಕೆ ಪಾಠ ಕಲಿಸುವ ನಿಟ್ಟಿನಲ್ಲಿ ಕೈಗೊಳ್ಳುವ ನಿರ್ಧಾರಗಳ ವಿಚಾರದಲ್ಲಿ ವಿರೋಧ ಪಕ್ಷ (ಕಾಂಗ್ರೆಸ್‌) ಹಾಗೂ ಇಡೀ ದೇಶ ಸರ್ಕಾರವನ್ನು ಬೆಂಬಲಿಸಿತ್ತು. ಆದರೆ, ಕದನ ವಿರಾಮ ಘೋಷಣೆ ಬೆನ್ನಲ್ಲೇ, ಪಾಕ್‌ ಸೇನೆ ದಾಳಿ ಮಾಡಿರುವುದು ಕಳವಳಕಾರಿ ಸಂಗತಿ ಎಂದು ಗಮನ ಸೆಳೆದಿದ್ದಾರೆ.

'ಭಾರತ–ಪಾಕಿಸ್ತಾನ ಸಂಘರ್ಷ ನಮಗೆ ಸಂಬಂಧಿಸಿದ ವಿಚಾರವಲ್ಲ' ಎಂದು ಕೆಲವು ದಿನಗಳ ಹಿಂದಷ್ಟೇ ಹೇಳಿದ್ದ ಅಮೆರಿಕ ನಾಯಕರು, ಕದನ ವಿರಾಮದ ಕುರಿತು ಶನಿವಾರ ಮಾತುಕತೆ ನಡೆಸಿದ್ದರು. ಈ ಬಗ್ಗೆ ಮಾತನಾಡಿದ ಪೈಲಟ್‌, 'ಕೇಂದ್ರ ಸರ್ಕಾರವು ಈ (ಅಮೆರಿಕೆದ) ಭಾಗವಹಿಸುವಿಕೆಯನ್ನು ಒಪ್ಪಿಕೊಂಡಿದೆಯೇ? ಯಾವ ಷರತ್ತುಗಳನ್ನು ವಿಧಿಸಲಾಗಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ' ಎಂದಿದ್ದಾರೆ.

ಟ್ರಂಪ್‌ ಅವರು ಭಾರತ, ಪಾಕ್‌ ನಡುವಣ ಕಾಶ್ಮೀರ ಸಮಸ್ಯೆ ಸಾವಿರಾರು ವರ್ಷಗಳಿಂದ ಇದೆ ಎಂದು ಹೇಳಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೈಲಟ್‌, 'ನೆರೆಯ ರಾಷ್ಟ್ರ ಕೇವಲ 78 ವರ್ಷ ಹಳೆಯದ್ದು. ಮೂರನೇಯವರ ಮಧ್ಯಸ್ಥಿಕೆಗೆ ಭಾರತದ ನೀತಿಗಳಲ್ಲಿ ಅವಕಾಶವಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.