
ಭೋಪಾಲ್: ‘10 ವರ್ಷಗಳ ನಂತರ ದೇವರು ನಮಗೆ ಖುಷಿ ನೀಡಿದ್ದನು. ಬಳಿಕ, ದೇವರೇ ಅದನ್ನು ಕಸಿದಿದ್ದಾನೆ’ ಎಂದು ಮಧ್ಯಪ್ರದೇಶದ ಇಂದೋರ್‌ನ ಮನೆಯ ಮೂಲೆಯೊಂದರಲ್ಲಿ ಕುಳಿತಿದ್ದ ವೃದ್ಧೆಯೊಬ್ಬರು ನೋವಿನಿಂದ ಹೇಳುತ್ತಿದ್ದರು.
ಹೌದು, ಇಂದೋರ್‌ನ ಭಗೀರಥಪುರದ ಕಲುಷಿತ ನೀರು ಸೇವನೆಯ ದುರಂತಗಳಲ್ಲಿ ಇದೂ ಒಂದಾಗಿದೆ. ಮಗುವಿಗೆ ಕುಡಿಸುವ ಹಾಲಿಗೆ ಬೆರೆಸಿದ್ದ ನಲ್ಲಿ ನೀರು ಆ ಮಗುವಿನ ಜೀವವನ್ನೇ ತೆಗೆದಿದೆ. ಈವರೆಗೆ ಇಂದೋರ್‌ನಲ್ಲಿ ಕಲುಷಿತ ನೀರು ಸೇವಿಸಿ 9 ಮಂದಿ ಮೃತಪಟ್ಟಿದ್ದಾರೆ. ಆ ಪೈಕಿ ಐದೂವರೆ ತಿಂಗಳ ಅಯಾನ್ ಎಂಬ ಮಗು ಸಹ ಸೇರಿದೆ.
ನೋವು ತೋಡಿಕೊಂಡ ವೃದ್ಧೆಯ ಮಗನಿಗೆ ಮದುವೆಯಾಗಿ 10 ವರ್ಷಗಳ ಕಾಲ ಮಕ್ಕಳಿರಲಿಲ್ಲ. ಇತ್ತೀಚೆಗೆ ಅವರ ಸೊಸೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಅದಕ್ಕೆ ಅಯಾನ್ ಎಂದು ಹೆಸರಿಟ್ಟಿದ್ದರು. ತಾಯಿಯಿಂದ ಎದೆಹಾಲು ಬರದ ಕಾರಣ ಪ್ಯಾಕೇಟ್ ಹಾಲನ್ನು ಕೊಡಲು ವೈದ್ಯರು ಸಲಹೆ ನೀಡಿದ್ದರು. ಅದರಂತೆ, ಗಟ್ಟಿ ಹಾಲಿಗೆ ತಾವು ಸದಾ ಬಳಸುತ್ತಿದ್ದ ನಲ್ಲಿ ನೀರನ್ನೇ ಬೆರೆಸಿ ಮಗುವಿಗೆ ನೀಡಿದ್ದರು. ದುರಾದೃಷ್ಟವಶಾತ್, ಕಲುಷಿತಗೊಂಡಿದ್ದ ನೀರು ವಿಷವಾಗಿ ಪರಿಣಮಿಸಿದ್ದು, ಮಗು ಮೃತಪಟ್ಟಿದೆ.
ಅಯಾನ್ ತಂದೆ ಖಾಸಗಿ ಕೊರಿಯರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ನೋವು ತೋಡಿಕೊಂಡಿದ್ದಾರೆ.
ಮಗು ಆರೋಗ್ಯವಾಗಿತ್ತು. ಯಾವುದೇ ಸಮಸ್ಯೆ ಇರಲಿಲ್ಲ. ಎರಡು ದಿನಗಳ ಹಿಂದೆ ಅಯಾನ್‌ಗೆ ಜ್ವರ, ಭೇದಿ ಕಾಣಿಸಿಕೊಂಡಿತು. ಬಳಿಕ, ಅವನನ್ನು ಆಸ್ಪತ್ರೆಗೆ ಕರೆದೊಯ್ದೆವು. ವೈದ್ಯರು ಔಷಧ ನೀಡಿದ್ದರು. ಆದರೂ ಪರಿಸ್ಥಿತಿ ಸುಧಾರಿಸಿರಲಿಲ್ಲ. ಭಾನುವಾರ ರಾತ್ರಿ ಮಗುವಿನ ಸ್ಥಿತಿ ಗಂಭೀರವಾಯಿತು. ಸೋಮವಾರ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿತು ಎಂದು ಹೇಳಿದ್ದಾರೆ.
ಕಲುಷಿತ ನೀರಿನಿಂದಲೇ ಮಗು ಮೃತಪಟ್ಟಿದೆ ಎಂದಿರುವ ಸುನಿಲ್, ನೀರು ಕಲುಷಿತಗೊಂಡಿದೆ ಎಂದು ಯಾರೊಬ್ಬರೂ ನಮಗೆ ತಿಳಿಸಲಿಲ್ಲ. ನೆರೆಹೊರೆಯವರೂ ಇದೇ ನೀರು ಬಳಸುತ್ತಿದ್ದು, ಯಾವುದೇ ಎಚ್ಚರಿಕೆ ನೀಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
‘ನಾವು ಬಡವರು, ನಮ್ಮ ಮಗ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಈ ದುರಂತದ ಬಗ್ಗೆ ನಾವು ಯಾರನ್ನೂ ದೂರುವುದಿಲ್ಲ. ದೇವರು 10 ವರ್ಷಗಳ ನಂತರ ನಮಗೆ ಖುಷಿ ನೀಡಿದ್ದ. ಈಗ ಅವನೇ ಹಿಂಪಡೆದಿದ್ದಾನೆ’ ಎಂದು ಸುನಿಲ್ ತಾಯಿ ಹೇಳಿದ್ದಾರೆ.
ಆದರೆ, ಮೃತ ಮಗುವಿನ ತಾಯಿ ಆಗಾಗ್ಗೆ ಪ್ರಜ್ಞೆ ಕಳೆದುಕೊಳ್ಳುತ್ತಿದ್ದು, ನೋವಿನಿಂದ ಹೊರಬರಲಾರದೇ ತತ್ತರಿಸುತ್ತಿದ್ದಾರೆ.
ಇಂದು ಒಂದು ಮಗುವಿನ ಕಥೆಯಾದರೆ. ಇಂತಹ ಅದೆಷ್ಟೊ ಕಥೆಗಳು ಇಂದೋರ್‌ನಲ್ಲಿವೆ ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.