ADVERTISEMENT

ಪಶ್ಚಿಮ ಬಂಗಾಳದಲ್ಲಿ TMC ಆಡಳಿತ ಮುಂದುವರಿದರೆ ರಾಷ್ಟ್ರೀಯ ಭದ್ರತೆಗೆ ಅಪಾಯ: BJP

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜನವರಿ 2024, 5:14 IST
Last Updated 6 ಜನವರಿ 2024, 5:14 IST
<div class="paragraphs"><p>ಸುವೇಂದು ಅಧಿಕಾರಿ ಮತ್ತು ಮಮತಾ ಬ್ಯಾನರ್ಜಿ </p></div>

ಸುವೇಂದು ಅಧಿಕಾರಿ ಮತ್ತು ಮಮತಾ ಬ್ಯಾನರ್ಜಿ

   

–ಪಿಟಿಐ ಚಿತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರದ ಆಡಳಿತ ಮುಂದುವರಿದರೆ ರಾಷ್ಟ್ರೀಯ ಭದ್ರತೆಗೆ ಅಪಾಯವಿದೆ ಎಂದು ಬಿಜೆಪಿ ಟೀಕಿಸಿದೆ.

ADVERTISEMENT

ಪಡಿತರ ವಿತರಣೆಯಲ್ಲಿ ನಡೆದಿರುವ ಹಗರಣ ಸಂಬಂಧ ಇ.ಡಿ ಅಧಿಕಾರಿಗಳು ಶುಕ್ರವಾರ ಏಕಕಾಲದಲ್ಲಿ ಪಶ್ಚಿಮ ಬಂಗಾಳದ 15 ಕಡೆ ದಾಳಿ ನಡೆಸಿದ್ದಾರೆ. ಅಧಿಕಾರಿಗಳ ತಂಡವೊಂದು ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲೀ ಎಂಬಲ್ಲಿರುವ ಟಿಎಂಸಿ ನಾಯಕ ಶೇಖ್‌ ಶಾಜಹಾನ್‌ ಅವರ ಮನೆಯಲ್ಲಿ ಶೋಧಕ್ಕೆ ಮುಂದಾಗಿತ್ತು.

ಇದೇ ವೇಳೆ ಶೇಖ್‌ ಶಾಜಹಾನ್‌ ಬೆಂಬಲಿಗರು ಇ.ಡಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದು, ವಾಹನಗಳನ್ನೂ ಜಖಂಗೊಳಿಸಿದ್ದರು. ಈ ಘಟನೆಯನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.

‘ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಇ.ಡಿ ಅಧಿಕಾರಿಗಳು ಮತ್ತು ಸಿಆರ್‌ಪಿಎಫ್‌ ಸಿಬ್ಬಂದಿ ಮೇಲೆ ಟಿಎಂಸಿ ಬೆಂಬಲಿಗರು ಕ್ರೂರವಾಗಿ ದಾಳಿ ನಡೆಸಿರುವುದೇ ಇದಕ್ಕೆ ಸಾಕ್ಷಿ’ ಎಂದು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ‘ಎಕ್ಸ್‌’ನಲ್ಲಿ ಕಿಡಿಕಾರಿದ್ದಾರೆ.

‘ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲಿ. ಜನರ ಹಾಗೂ ಇ.ಡಿ ಅಧಿಕಾರಿಗಳ ಕ್ಷಮೆಯಾಚಿಸಲಿ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ಆಗ್ರಹಿಸಿದ್ದಾರೆ.

ಬಂಗಾಳದಲ್ಲಿ ‘ಜಂಗಲ್‌ ರಾಜ್‌’ ಇದೆ ಎಂದು ಟೀಕಿಸಿರುವ ಅವರು, ‘ದಾಳಿ ನಡೆಸಿದವರಲ್ಲಿ ರೋಹಿಂಗ್ಯಾಗಳು ಮತ್ತು ಅಕ್ರಮ ವಲಸಿಗರೂ ಇದ್ದರು’ ಎಂದು ಆರೋಪಿಸಿದ್ದಾರೆ.

‘ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸರ್ಕಾರದ ಆಡಳಿತ ಮುಂದುವರಿದರೆ ರಾಷ್ಟ್ರೀಯ ಭದ್ರತೆಗೆ ಅಪಾಯವಿದೆ’ ಎಂದು ಬಿಜೆಪಿ ಪಶ್ಚಿಮ ಬಂಗಾಳ ಸಹ ಉಸ್ತುವಾರಿ ಅಮಿತ್‌ ಮಾಳವೀಯಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.