ADVERTISEMENT

ವರದಕ್ಷಿಣೆ ಕಿರುಕುಳ | ಜಾಮೀನಿನ ಪರಿಣಾಮದ ಅರಿವು ಇರಲಿ: ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2025, 16:14 IST
Last Updated 4 ಮಾರ್ಚ್ 2025, 16:14 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ವರದಕ್ಷಿಣೆ ಕಿರುಕುಳದಿಂದಾಗಿ ಉಂಟಾದ ಸಾವಿನ ಪ್ರಕರಣಗಳಲ್ಲಿ ನ್ಯಾಯಾಲಯಗಳು ಜಾಮೀನು ನೀಡುವಾಗ ಅದರ ಸಾಮಾಜಿಕ ಪರಿಣಾಮಗಳನ್ನೂ ಪರಿಗಣಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಇಂತಹ ಪ್ರಕರಣಗಳು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಅಡಿಪಾಯಕ್ಕೇ ಪೆಟ್ಟು ಕೊಟ್ಟಿರುತ್ತವೆ ಎಂದು ಕೋರ್ಟ್ ಹೇಳಿದೆ.

‘ಇಂತಹ ಹೀನ ಕೃತ್ಯಗಳ ಪ್ರಮುಖ ಸೂತ್ರಧಾರರು ದೈಹಿಕ ಮತ್ತು ಮಾನಸಿಕ ಯಾತನೆ ನೀಡುತ್ತಿದ್ದರು ಎಂಬುದನ್ನು ಸಾಕ್ಷ್ಯಗಳು ಹೇಳುತ್ತಿದ್ದರೂ ಅವರು ಜಾಮೀನಿನ ಮೇಲೆ ಹೊರಗಿರಲು ಅವಕಾಶ ಮಾಡಿಕೊಟ್ಟರೆ, ನ್ಯಾಯಸಮ್ಮತ ವಿಚಾರಣಾ ಪ್ರಕ್ರಿಯೆ ಹಾಗೂ ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯ ಮೇಲೆ ಜನ ಇರಿಸಿರುವ ವಿಶ್ವಾಸಕ್ಕೆ ಪೆಟ್ಟು ಬೀಳುತ್ತದೆ’ ಎಂದು ನ್ಯಾಯಮೂರ್ತಿಗಳಾದ ವಿಕ್ರಮನಾಥ್ ಮತ್ತು ಸಂದೀಪ್ ಮೆಹ್ತಾ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.

ವರದಕ್ಷಿಣೆಯ ಕಿರುಕುಳ ಮತ್ತು ಸಾವು ಪ್ರಕರಣದಲ್ಲಿ ಆರೋಪಿಗಳಾದ ಮುಖ್ತಾರ್ ಅಹಮದ್ (ಮಾವ) ಹಾಗೂ ತಾರಾ ಬಾನು (ಅತ್ತೆ) ಅವರಿಗೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಜಾಮೀನನ್ನು ಪೀಠವು ರದ್ದುಪಡಿಸಿದೆ. ಈ ಪ್ರಕರಣದಲ್ಲಿ ಸೊಸೆಯು ಮದುವೆಯಾದ ಎರಡು ವರ್ಷಗಳ ಒಳಗೆ, ವರದಕ್ಷಿಣೆ ಕಿರುಕುಳದಿಂದಾಗಿ ಮೃತಪಟ್ಟಿದ್ದಳು ಎನ್ನಲಾಗಿದೆ.

ADVERTISEMENT

ಇಂದಿನ ಸಮಾಜದಲ್ಲಿ ವರದಕ್ಷಿಣೆ ಕಿರುಕುಳವು ಹೆಣ್ಣುಮಕ್ಕಳ ಪ್ರಾಣಕ್ಕೆ ಇಂದಿಗೂ ಎರವಾಗುತ್ತಿದೆ, ಇದು ಬಹಳ ಗಂಭೀರವಾದ ಸಂಗತಿ. ಇಂತಹ ಪ್ರಕರಣಗಳಲ್ಲಿ ಜಾಮೀನನ್ನು ಎಂತಹ ಸಂದರ್ಭದಲ್ಲಿ ನೀಡಲಾಯಿತು ಎಂಬ ಬಗ್ಗೆ ನ್ಯಾಯಾಲಯಗಳು ಆಳವಾಗಿ ಪರಿಶೀಲಿಸಬೇಕು ಎಂದು ಪೀಠ ಹೇಳಿದೆ.

ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳು ನೀಡುವ ಆದೇಶಗಳಿಂದ ಹೊರಹೊಮ್ಮುವ ಸಾಮಾಜಿಕ ಸಂದೇಶವು ಬಹಳ ಮಹತ್ವದ್ದಾಗುತ್ತದೆ. ಮದುವೆಯಾಗಿ ಎರಡು ವರ್ಷ ತುಂಬುವ ಮೊದಲೇ ಹೆಣ್ಣು ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಜೀವ ಕಳೆದುಕೊಂಡಾಗ ನ್ಯಾಯಾಲಯಗಳು ಹೆಚ್ಚಿನ ಎಚ್ಚರಿಕೆಯನ್ನು ಪ್ರದರ್ಶಿಸಬೇಕು ಎಂದು ಅದು ಕಿವಿಮಾತು ಹೇಳಿದೆ.

ಈ ಪ್ರಕರಣದಲ್ಲಿ 2024ರ ಜನವರಿಯಲ್ಲಿ ಎಫ್ಐಆರ್ ದಾಖಲಾಗಿತ್ತು. ಮೃತ ಶಾಹಿದಾ ಅವರನ್ನು ಸಮಿ ಖಾನ್ ಎನ್ನುವವರಿಗೆ 2022ರ ಫೆಬ್ರುವರಿಯಲ್ಲಿ ಮದುವೆ ಮಾಡಿಕೊಡಲಾಗಿತ್ತು. ಶಾಹಿದಾ ಅವರಿಗೆ ಪತಿಯ ಮನೆಯಲ್ಲಿ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿತ್ತು ಎಂದು ದೂರಲಾಗಿದೆ.

2024ರ ಜನವರಿ 22ರಂದು ಶಾಹಿದಾ ಅವರ ಮೃತದೇಹವು ಪತಿಯ ಮನೆಯಲ್ಲಿ ಫ್ಯಾನ್‌ಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಕೆಯ ಮಂಡಿಯು ಹಾಸಿಗೆಯ ಮೇಲೆ ಇತ್ತು. ಮರಣೋತ್ತರ ಪರೀಕ್ಷೆಯು ಆತ್ಮಹತ್ಯೆಯ ಸಾಧ್ಯತೆಯನ್ನು ತಳ್ಳಿಹಾಕಿತು.

ಜಾಮೀನಿನ ಮಾನದಂಡಗಳನ್ನು ಆಳವಾಗಿ ಪರಿಶೀಲಿಸದೆ ಅನ್ವಯಗೊಳಿಸಿದರೆ ಅಪರಾಧ ಗಂಭೀರವಲ್ಲ ಎಂದಂತೆ ಆಗಿಬಿಡುತ್ತದೆ. ಅಲ್ಲದೆ ಅದು ವರದಕ್ಷಿಣೆ ಕಿರುಕುಳಗಳಿಂದಾಗಿ ಉಂಟಾಗುವ ಪ್ರಾಣಹಾನಿಯನ್ನು ತಡೆಯಲು ನ್ಯಾಯಾಂಗ ಕೈಗೊಂಡಿರುವ ದೃಢನಿಶ್ಚಯದ ಬಗ್ಗೆ ಸಾರ್ವಜನಿಕರು ಇರಿಸಿರುವ ವಿಶ್ವಾಸವನ್ನು ದುರ್ಬಲಗೊಳಿಸುವ ಅಪಾಯವೂ ಇದೆ.
– ವಿಭಾಗೀಯ ಪೀಠದ ಕಿವಿಮಾತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.