ADVERTISEMENT

ಶೀಘ್ರ ‘ಕೋವಿಶೀಲ್ಡ್‌’ ಲಸಿಕೆ?

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 19:31 IST
Last Updated 28 ಡಿಸೆಂಬರ್ 2020, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ತಾವು ಅಭಿವೃದ್ಧಿಪಡಿಸಿರುವ ಕೋವಿಡ್‌ ಲಸಿಕೆ, ‘ಕೊವಿಶೀಲ್ಡ್‌’ ಅನ್ನು ಜನವರಿ ತಿಂಗಳಲ್ಲಿ ಬಿಡುಗಡೆ ಮಾಡಲು ಸಿದ್ಧ ಎಂದು ಪುಣೆಯ ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಹೇಳಿದೆ.

ಈಗಾಗಲೇ ಸುಮಾರು 4ರಿಂದ 5 ಕೋಟಿ ಡೋಸ್‌ಗಳಷ್ಟು ಲಸಿಕೆಯನ್ನು ಸಿದ್ಧಪಡಿಸಿಟ್ಟಿರುವ ಸಂಸ್ಥೆಯು, ಲಸಿಕೆಯ ವೈದ್ಯಕೀಯ ಪ್ರಯೋಗದ ಫಲಿತಾಂಶದ ವಿವರಗಳನ್ನು ಭಾರತ ಮತ್ತು ಬ್ರಿಟನ್‌ ಸರ್ಕಾರಗಳಿಗೆ ಸಲ್ಲಿಸಿರುವುದಾಗಿ ತಿಳಿಸಿದೆ.

‘ಔಷಧ ನಿಯಂತ್ರಕರ ಅನುಮೋದನೆಗಾಗಿ ನಾವು ಕಾಯುತ್ತಿದ್ದೇವೆ. ಈ ಪ್ರಕ್ರಿಯೆಯನ್ನು ನಾವು ಗೌರವಿಸಲೇಬೇಕು. ಮುಂದಿನ ಕೆಲವೇ ದಿನಗಳಲ್ಲಿ ಒಳ್ಳೆಯ ಸುದ್ದಿಯನ್ನು ನಿರೀಕ್ಷಿಸುತ್ತಿದ್ದೇವೆ’ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದಾರ್‌ ಪೂನಾವಾಲಾ ಆನ್‌ಲೈನ್‌ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. ‘ಮಾರ್ಚ್‌ ವೇಳೆಗೆ ನಮ್ಮ ಉತ್ಪಾದನಾ ಸಾಮರ್ಥ್ಯವು 10 ಕೋಟಿ ಡೋಸ್‌ಗೆ ಹೆಚ್ಚಲಿದೆ. ಜೂನ್‌ವೇಳೆಗೆ 30 ಕೋಟಿ ಡೋಸ್‌ ಲಸಿಕೆ ಲಭ್ಯವಾಗುವ ನಿರೀಕ್ಷೆ ಇದೆ. ಭಾರತವೇ ನಮ್ಮ ಆದ್ಯತೆಯಾಗಲಿದೆ ಎಂದು ಪೂನಾವಾಲಾ ತಿಳಿಸಿದರು.

ADVERTISEMENT

‘2021ರ ಮೊದಲ ಆರು ತಿಂಗಳಲ್ಲಿ ಜಾಗತಿಕ ಮಟ್ಟದಲ್ಲಿ ಲಸಿಕೆಯ ಕೊರತೆ ಉಂಟಾಗಬಹುದು. ಇದನ್ನು ತಡೆಯಲಾಗದು. ಇತರ ತಯಾರಕರೂ ಪೂರೈಕೆ ಆರಂಭಿಸಿದ ಬಳಿಕ, ಆಗಸ್ಟ್‌– ಸೆಪ್ಟೆಂಬರ್‌ ವೇಳೆಗೆ ಪರಿಸ್ಥಿತಿ ತಿಳಿಗೊಳ್ಳಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಲಸಿಕೆ ತಯಾರಿಕೆಯಲ್ಲಿ ಜಗತ್ತಿನ ಅತಿ ದೊಡ್ಡ ಸಂಸ್ಥೆ ಎನಿಸಿರುವ ಸೆರಂ ಇನ್‌ಸ್ಟಿಟ್ಯೂಟ್‌, ಅಕ್ಸ್‌ಫರ್ಡ್‌– ಅಸ್ಟ್ರಾಜೆನೆಕಾ ಲಸಿಕೆಯನ್ನು ಸಹ ಉತ್ಪಾದಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.