ADVERTISEMENT

ಡೆಲ್ಟಾ ರೂಪಾಂತರ ವಿರುದ್ಧವೂ ಕೋವಿಶೀಲ್ಡ್, ಕೊವ್ಯಾಕ್ಸಿನ್ ಪರಿಣಾಮಕಾರಿ: ಕೇಂದ್ರ

ಪಿಟಿಐ
Published 26 ಜೂನ್ 2021, 1:27 IST
Last Updated 26 ಜೂನ್ 2021, 1:27 IST
ಸಾಂದರ್ಭಿಕ ಚಿತ್ರ (ಐಸ್ಟಾಕ್)
ಸಾಂದರ್ಭಿಕ ಚಿತ್ರ (ಐಸ್ಟಾಕ್)   

ನವದೆಹಲಿ: ಕೊರೊನಾ ವೈರಸನ್‌ ಆಲ್ಫಾ, ಬೇಟಾ, ಗಾಮಾ ಮತ್ತು ಡೆಲ್ಟಾ ರೂಪಾಂತರಗಳ ವಿರುದ್ಧವೂ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳು ಕೆಲಸ ಮಾಡುತ್ತವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಡೆಲ್ಟಾ ಪ್ಲಸ್ ರೂಪಾಂತರದ ವಿರುದ್ಧದ ಪರಿಣಾಮಕಾರಿತ್ವದ ಬಗ್ಗೆ ಪರೀಕ್ಷೆಗಳು ನಡೆಯುತ್ತಿವೆ ಎಂದೂ ಸರ್ಕಾರ ತಿಳಿಸಿದೆ.

ವಿವಿಧ ರೂಪಾಂತರಗಳನ್ನು ತಟಸ್ಥಗೊಳಿಸುವ ಲಸಿಕೆಗಳ ಸಾಮರ್ಥ್ಯದ ವಿಚಾರದಲ್ಲಿ, ಆಲ್ಫಾ ರೂಪಾಂತರದ ವಿರುದ್ಧ ಕೊವ್ಯಾಕ್ಸಿನ್‌ ಲಸಿಕೆಯ ಪರಿಣಾಮಕಾರಿತ್ವವು ಬದಲಾಗದೇ ಇರುವುದು ಕಂಡುಬಂದಿದೆ. ಆಲ್ಫಾ ರೂಪಾಂತರದ ವಿರುದ್ಧ ಕೋವಿಶೀಲ್ಡ್ ಲಸಿಕೆಯ ಸಾಮರ್ಥ್ಯವು ತುಸು ಕಡಿಮೆಯಾಗಿರುವುದು ಕಂಡುಬಂದಿದೆ. ಡೆಲ್ಟಾ ರೂಪಾಂತರದ ವಿರುದ್ಧ ಕೊವ್ಯಾಕ್ಸಿನ್ ಪರಿಣಾಮಕಾರಿಯಾಗಿದೆ. ಆದರೆ ಸೃಷ್ಟಿಸುವ ಪ್ರತಿಕಾಯಗಳ ಪ್ರಮಾಣ ಮೂರು ಪಟ್ಟು ಕಡಿಮೆಯಾಗಿದೆ. ಡೆಲ್ಟಾ ರೂಪಾಂತರದ ವಿರುದ್ಧ ಕೋವಿಶೀಲ್ಡ್ ಸೃಷ್ಟಿಸುವ ಪ್ರತಿಕಾಯಗಳ ಪ್ರಮಾಣ ಎರಡುಪಟ್ಟು ಕಡಿಮೆಯಾಗಿದೆ. ಫೈಜರ್ ಮತ್ತು ಮಾಡರ್ನಾ ಲಸಿಕೆಗಳ ಪರಿಣಾಮಕಾರಿತ್ವ ಏಳು ಪಟ್ಟು ಕಡಿಮೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ನಿರ್ದೇಶಕ ಬಲರಾಂ ಭಾರ್ಗವ ತಿಳಿಸಿದ್ದಾರೆ.

‘ಆದಾಗ್ಯೂ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್‌ ಲಸಿಕೆಗಳು ಆಲ್ಫಾ, ಬೇಟಾ, ಗಾಮಾ ಮತ್ತು ಡೆಲ್ಟಾ ರೂಪಾಂತರಗಳ ವಿರುದ್ಧ ಕೆಲಸ ಮಾಡುತ್ತವೆ ಮತ್ತು ಪರಿಣಾಮಕಾರಿಯಾಗಿವೆ’ ಎಂದು ಅವರು ಹೇಳಿದ್ದಾರೆ.

ಡೆಲ್ಟಾ ಪ್ಲಸ್ ರೂಪಾಂತರವು 12 ದೇಶಗಳಲ್ಲಿ ಕಂಡುಬಂದಿದೆ. ಭಾರತದಲ್ಲಿ 12 ರಾಜ್ಯಗಳಲ್ಲಿ 51 ಪ್ರಕರಣಗಳಿದ್ದು, ಆಯಾ ಪ್ರದೇಶಕ್ಕಷ್ಟೇ ಸೀಮಿತವಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಐಸಿಎಂಆರ್‌ ಮತ್ತು ಎನ್‌ಐವಿಯಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿತ ವೈರಸ್ ಅನ್ನು ಪ್ರತ್ಯೇಕಿಸಲಾಗಿದೆ. ಈ ರೂಪಾಂತರದ ವಿರುದ್ಧ ಲಸಿಕೆಗಳ ಪರಿಣಾಮಕಾರಿತ್ವದ ಬಗ್ಗೆ ಪರೀಕ್ಷೆಗಳು ನಡೆಯುತ್ತಿವೆ. 7ರಿಂದ 10 ದಿನಗಳಲ್ಲಿ ಫಲಿತಾಂಶ ದೊರೆಯಲಿದೆ ಎಂದು ಭಾರ್ಗವ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.